ಬೆಂಗಳೂರು : ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅನರ್ಹಗೊಂಡ ಅರ್ಜಿ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಸಾಗುವಳಿಗಾಗಿ ಬಗರ್ ಹುಕುಂ ಯೋಜನೆ ಯಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬಡವರಿಗೆ ಅನುಕೂಲ ವಾಗಲಿ ಎಂಬ ಕಾರಣಕ್ಕೆ ಬಗರ್ ಹುಕುಂ ಕಾನೂನನ್ನು ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವೂ ಹೌದು. ಹೀಗಾಗಿ ತಿರಸ್ಕೃತ ಅಥವಾ ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳಲ್ಲಿ ತಪ್ಪಾಗಿದ್ದರೆ ಮತ್ತೊಮ್ಮೆ ಪುನರ್‌ಪರಿಶೀಲನೆಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಮಾತ್ರ ಅನರ್ಹಗೊಳಿಸಿಲ್ಲ. ಬದಲಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಭೂಮಿಗೂ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾನೂನಿನ ಪ್ರಕಾರ ಸದರಿ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

