HomeKarnatakaಬೆಂಗಳೂರು ಅಥವಾ ಕಲಬುರಗಿಯಲ್ಲಿ 'ವಚನ ಮಂಟಪ' ಹಾಗೂ 'ವಚನ ವಿಶ್ವವಿದ್ಯಾಲಯ' ಸ್ಥಾಪಿಸಿ : ಸಿಎಂಗೆ ಪತ್ರ...

ಬೆಂಗಳೂರು ಅಥವಾ ಕಲಬುರಗಿಯಲ್ಲಿ ‘ವಚನ ಮಂಟಪ’ ಹಾಗೂ ‘ವಚನ ವಿಶ್ವವಿದ್ಯಾಲಯ’ ಸ್ಥಾಪಿಸಿ : ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ :  ಬೆಂಗಳೂರು ಅಥವಾ ಕಲಬುರಗಿಯಲ್ಲಿ ‘ವಚನ ಮಂಟಪ’ ಹಾಗೂ ‘ವಚನ ವಿಶ್ವವಿದ್ಯಾಲಯ’ ಸ್ಥಾಪಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಪತ್ರದ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಮನವಿ ಮಾಡಿದ್ದಾರೆ.

ಕನ್ನಡ ನಾಡು ಇಂದು ಇಡೀ ವಿಶ್ವದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಿ, ಭಾರತ ದೇಶದ ಆರ್ಥಿಕ ಯಂತ್ರವಾಗಿ ಕಾರ್ಯ ನಿರ್ವಹಿಸುತ್ತಾ ಒಂದು ಅಮೋಘ ರಾಜ್ಯವಾಗಿ ರೂಪುಗೊಳ್ಳಲು ನಮ್ಮ ನಾಡಿನ ತಾತ್ವಿಕ ಅಡಿಪಾಯವೇ ಕಾರಣ ಎಂದು ಹೇಳಿದ್ದಾರೆ.

ಈ ತತ್ವಗಳ ಆಶಯವನ್ನು ಜಗತ್ತಿಗೆ ತಿಳಿಸಲು ಇರುವ ಭಾಷೆಯ ಅಂತರಕ್ಕೆ ಸೇತುವೆ ಕಟ್ಟುವ ಮಹತ್ತರವಾದ ಕೆಲಸ ಮಾಡುವ ನಿಟ್ಟಿನಲ್ಲಿ ಈ ಕೆಳಗಿನ ಎರಡು ಮನವಿಗಳನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1) ವಚನ ಮಂಟಪ: ನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಅಥವಾ ಶರಣ ಸಾಹಿತ್ಯದ ಕೇಂದ್ರ ಬಿಂದುವಾಗಿದ್ದ ಕಲಬುರಗಿಯಲ್ಲಿ ಜಗಜ್ಯೋತಿ ಗುರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ದೇವರ ದಾಸಿಮ್ಮಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಸರ್ವಜ್ಞರಂತಹ ನಾಡಿನ ಮೇರು ಶರಣ ಸಾಹಿತಿಗಳ ಬದುಕು ಹಾಗೂ ಅವರಿಂದ ರಚಿತವಾದ ವಚನಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಅರಿವು ಮೂಡಿಸುವ ಕೇಂದ್ರವಾಗಿ, ವಚನ ಸಂಗ್ರಹಾಲಯವಾಗಿ “ವಚನ ಮಂಟಪ”ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಇದಕ್ಕಾಗಿ 20 ಎಕರೆ ಜಾಗವನ್ನು ಮೀಸಲಿಡಬೇಕೆಂದು ಕೋರಿದ್ದಾರೆ.

2) ವಚನ ವಿಶ್ವವಿದ್ಯಾಲಯ: ನಾಡಿನಲ್ಲಿ ಸಮಾನತೆಯ ಯೋಚನಾ ಲಹರಿಯನ್ನು ಬಲವಾಗಿ ಪ್ರತಿಪಾದಿಸಿದ, ಕನ್ನಡ ನಾಡಿನಲ್ಲಿ ಸಾಮಾಜಿಕ ನ್ಯಾಯ ಹಾಗೂ ಜನರಲ್ಲಿ ಪ್ರಜ್ಞಾವಂತ ಮನೋಭಾವವನ್ನು ಮೂಡಿಸಿದ ನೆಲಮೂಲದ ಬಸವವಾದಿ ಶರಣರ ತತ್ವಗಳನ್ನು ಸೇರಿದಂತೆ ಪ್ರಗತಿಪರ ಕರ್ನಾಟಕಕ್ಕೆ ರಹದಾರಿಯಾಗಿರುವ ಎಲ್ಲಾ ತತ್ವಗಳ ಅಧ್ಯಯನಕ್ಕಾಗಿ ಹಾಗೂ ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶದ ಸಂವಿಧಾನದಲ್ಲಿ ಅಡಗಿರುವ ಈ ತತ್ವಗಳ ಬಗ್ಗೆ ಸಾರ್ವಕಾಲಿಕವಾಗಿ ಅರಿವು ಮೂಡಿಸುವ ಮೂಲಕ ಗುರು ಬಸವಣ್ಣನವರ ಜ್ಞಾನದ ಜ್ಯೋತಿಯ ಪ್ರಕಾಶವನ್ನು ಇಡೀ ಜಗತ್ತಿಗೆ ಪ್ರಜ್ವಲಿಸುವಂತೆ ಮೂಡುವ ಸಲುವಾಗಿ ರಾಜ್ಯದಲ್ಲಿ ಒಂದು ಕೇಂದ್ರೀಕೃತ ‘ವಚನ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಈ ಎರಡೂ ಕೋರಿಕೆಗಳು ಕೇವಲ ನನ್ನದಲ್ಲ ಬಸವಣ್ಣನವರನ್ನು ಪ್ರತಿಪಾದಿಸುವ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವಾಸಿಸುವ ಪ್ರತಿಯೊಬ್ಬರ ಬಯಕೆಯೂ ಆಗಿದೆ ಎಂದು ನಾನು ಭಾವಿಸುತ್ತೇನೆ. ದಯವಿಟ್ಟು ಈ ಮನವಿಯನ್ನು ಸ್ವೀಕರಿಸಿ ನಮ್ಮ ಈ ಕೋರಿಕೆಯನ್ನು ನೆರವೇರಿಸುವಂತೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular