ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನೇ ರೂಢಿಮಾಡಿಕೊಂಡಿದ್ದ ಸ್ಕೂಟರ್ ಸವಾರನಿಗೆ 3.04 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿ 50,000 ರೂ.ಗೂ ಅಧಿಕ ದಂಡ ಹೊಂದಿದವರ ಮನೆ ಮನೆಗೆ ತೆರಳಿ ಸಂಚಾರ ಪೊಲೀಸರು ದಂಡ ವಸೂಲಿ ಕಾರ್ಯ ಆರಂಭಿಸಿದ್ದಾರೆ. ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟರಾಮನ್ ಎಂಬುವರ ಕೆಎ 05 ಕೆಎಫ್ 7969 ನಂಬರ್ ನ ಹೋಂಡಾ ಆಕ್ಟಿವಾ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆಯ ಕೇಸ್ ದಾಖಲಾಗಿವೆ.
ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ನಲ್ಲಿ ಮಾತನಾಡುತ್ತಾ ಚಾಲನೆ, ಸಿಗ್ನಲ್ ಜಂಪ್ ಸೇರಿ ಹಲವು ಕೇಸ್ ದಾಖಲಾಗಿ ದಂಡ ವಸೂಲಿಗಾಗಿ ಪೊಲೀಸರು ಮನೆಗೆ ತೆರಳಿ ದಂಡಪಾವತಿಸುವಂತೆ ತಾಕೀತು ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ದಂಡ ಪಾವತಿಸಲು ಸಾಧ್ಯವಿಲ್ಲ. ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಆದರೆ, ದಂಡ ಪಾವತಿಸದಿದ್ದರೆ ಕೇಸ್ ದಾಖಲಿಸುವುದಾಗಿ ಪೊಲೀಸರು ನೋಟಿಸ್ ನೀಡಿದ್ದಾರೆ.