ಸಾಮಾನ್ಯವಾಗಿ ಎಲ್ಲರೂ ಖುಷಿಯಾಗಿದ್ದಾಗ, ಭಾವುಕರಾದಾಗ ಅಥವಾ ತುಂಭಾ ದುಃಖದಲ್ಲಿರುವಾಗ ಆತ್ಮೀಯರನ್ನು ತಬ್ಬಿಕೊಳ್ಳುತ್ತೇವೆ. ಪುಟ್ಟ ಮಕ್ಕಳನ್ನು ತಬ್ಬಿ ಮುದ್ದಾಡುವುದು ಕೂಡ ಸಾಮಾನ್ಯ. ಅಪ್ಪುಗೆ ಸಾಂತ್ವನ ನೀಡುತ್ತದೆ. ಆತ್ಮೀಯರನ್ನು ತಬ್ಬಿಕೊಳ್ಳುವುದು ಅತ್ಯುತ್ತಮ ಭಾವನೆಗಳಲ್ಲೊಂದು.
ವಿಜ್ಞಾನದ ಪ್ರಕಾರ ಅಪ್ಪುಗೆಯ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ವಿವಿಧ ರಾಸಾಯನಿಕ ಕ್ರಿಯೆಗಳಿಂದ ಮನಸ್ಸು ಉಲ್ಲಸಿತವಾಗುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಎಷ್ಟು ಬಾರಿ ಮತ್ತು ಎಷ್ಟು ಸಮಯದವರೆಗೆ ತಬ್ಬಿಕೊಂಡರೆ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಬೇಕು.
ದಿನಕ್ಕೆ ಎಷ್ಟು ಬಾರಿ ತಬ್ಬಿಕೊಳ್ಳಬೇಕು?
ಹಗ್ಗಿಂಗ್, ಫ್ಯಾಮಿಲಿ ಥೆರಪಿಯ ತಾಯಿ ಎಂದು ಕರೆಯಲ್ಪಡುತ್ತದೆ. ನಮಗೆ ಬದುಕಲು ದಿನಕ್ಕೆ 4 ಅಪ್ಪುಗೆಗಳು, ಆರೋಗ್ಯ ನಿರ್ವಹಣೆಗಾಗಿ 8 ಅಪ್ಪುಗೆಗಳು ಮತ್ತು ಉತ್ತಮ ಬೆಳವಣಿಗೆಗೆ 12 ಅಪ್ಪುಗೆಗಳು ಬೇಕು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಗೆ ದಿನಕ್ಕೆ ಎಷ್ಟು ಅಪ್ಪುಗೆಗಳು ಬೇಕು ಎಂಬುದಕ್ಕೆ ಆಧುನಿಕ ವಿಜ್ಞಾನವು ಯಾವುದೇ ನಿಖರವಾದ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಅಪ್ಪುಗೆಯ ಪ್ರಯೋಜನಗಳನ್ನು ಅನೇಕ ಅಧ್ಯಯನಗಳಲ್ಲಿ ದೃಢಪಡಿಸಲಾಗಿದೆ.
ಎಷ್ಟು ಸಮಯ ತಬ್ಬಿಕೊಳ್ಳಬೇಕು?
ಆರೋಗ್ಯಕರ ಪ್ರಯೋಜನಗಳಿಗಾಗಿ 5 ರಿಂದ 10 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವುದು ಅವಶ್ಯಕ. ದೀರ್ಘವಾದ ಅಪ್ಪುಗೆಯು ತ್ವರಿತ ಅಪ್ಪುಗೆಗಿಂತ ಹೆಚ್ಚು ತಕ್ಷಣದ ಆನಂದವನ್ನು ನೀಡುತ್ತದೆ. 20 ಸೆಕೆಂಡುಗಳ ಅಪ್ಪುಗೆ ಕೂಡ ತುಂಬಾ ಪ್ರಯೋಜನಕಾರಿ.
ಆತ್ಮೀಯರನ್ನು 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವ ಮೂಲಕ ಒತ್ತಡದ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಇದರಿಂದ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯವು ಸಹ ಸಾಮಾನ್ಯವಾಗಿರುತ್ತದೆ. ದಿನಕ್ಕೆ 20 ಸೆಕೆಂಡ್‌ಗಳ ಅಪ್ಪುಗೆಯನ್ನು ಹೆಚ್ಚು ಬಾರಿ ಮಾಡಿದರೆ, ಅದು ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ, ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. ಚೇತರಿಕೆಯನ್ನು ವೇಗಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.