![](https://kannadadunia.com/wp-content/uploads/2023/08/court-court.png)
ಕೊಪ್ಪಳ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ತೀರ್ಪು ಪ್ರಕಟಿಸಿದೆ.
ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಸರೂರು ಅಪ್ರಾಪ್ತ ವಯಸ್ಸಿನ ಬಾಲಕಿ ದೋಟಿಹಾಳ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬಿಜಕಲ್ ಗ್ರಾಮದ ಸಂತೋಷ ಗುಳೇದಗುಡ್ಡ ಎಂಬ ವ್ಯಕ್ತಿ ಸುಮಾರು 6 ತಿಂಗಳಿನಿAದ ಬಾಧಿತಳನ್ನು ಪ್ರೀತಿಸುತ್ತಿರುವುದಾಗಿ, ಮದುವೆಯಾಗುವುದಾಗಿ ಹೇಳುತ್ತಿದ್ದನು. ಬಾಧಿತಳು ನಿರಾಕರಿಸಿದರೂ ಹಿಂಬಾಲಿಸುತ್ತಾ ದಿನಾಂಕ: 15-03-2023 ರಂದು ಬಾಧಿತಳನ್ನು ಅಪಹರಿಸಿ, ಕುಷ್ಟಗಿಯಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ಗೋವಾ ರಾಜ್ಯದ ಕಲ್ಲಿಂಗೋಟ ಬೀಚ್‌ನ ಉಡುಪಿ ಹೋಟೆಲ್ ಹತ್ತಿರ ರೂಂ ಬಾಡಿಗೆ ಪಡೆದು ದಿನಾಂಕ: 17-03-2023 ರಿಂದ ದಿನಾಂಕ: 19-03-2023 ರ ಅವಧಿಯಲ್ಲಿ ಬಾಲಕಿಯೊಂದಿಗೆ ಬಲವಂತದ ಸಂಭೋಗ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು ದೂರು ಸ್ವೀಕರಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೊಂಡ ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್. ಅವರು ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೋ) ಸಂ:25/2023 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಕುಮಾರ ಡಿ.ಕೆ. ಅವರು ಆರೋಪಿ ಬಿಜಕಲ್‌ನ ಸಂತೋಷ ಗುಳೇದಗುಡ್ಡ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.