ಉಡುಪಿ: ಪೊಲೀಸ್ ಠಾಣೆಯಲ್ಲಿ ಮಾಲೀಕರಿಲ್ಲದ ವಾಹನಗಳನ್ನು ಹರಾಜು ಹಾಕುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ ಅಂಕದ ಕೋಳಿಗಳನ್ನು ಹರಾಜು ಹಾಕಲಾಗಿದ್ದು, ಖರೀದಿಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶ ಪಡಿಸಿಕೊಳ್ಳಲಾದ ಅಂಕದ ಕೋಳಿಗಳನ್ನು ಹರಾಜು ಹಾಕಲಾಗಿದೆ. ಮಣಿಪಾಲ ಪೊಲೀಸರು ಕೋಳಿ ಅಂಕದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿ ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಹೀಗೆ ವಶಕ್ಕೆ ಪಡೆದ ಕೋಳಿಗಳನ್ನು ಇದೀಗ ಠಾಣೆಯಲ್ಲಿ ಹರಾಜು ಹಾಕಿದ್ದಾರೆ.
ಒಂದು ಕೋಳಿಗೆ 400 ರೂ ನಿಂದ ಹರಾಜು ಪ್ರಕ್ರಿಯೆ ನಡೆದಿದ್ದು, ಕೋಳಿಗಳನ್ನು ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.
ಕರಾವಳಿಯಲ್ಲಿ ಕೋಳಿ ಅಂಕ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಕೋಳಿ ಅಂಕ ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ.