ಬೆಂಗಳೂರು: ಮಾನದಂಡದಂತೆ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿಲ್ಲ. ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಫೆ.7ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ನಾವು ಧ್ವನಿ ಎತ್ತಲೇ ಬೇಕಾದ ಅನಿವಾರ್ಯತೆ ಇದೆ. ಬರಗಾಲದ ಪರಿಹಾರ ಹಣವನ್ನೂ ಕೇಂದ್ರ ಬಿಡುಗಡೆ ಮಾಡುತ್ತಿಲ್ಲ. ಪ್ರತಿಭಟನೆಯಲ್ಲಿ ಎಲ್ಲಾ ಸಂಸದರು ಕೂಡ ಭಾಗಿಯಾಗಬೇಕು ಎಂದು ತಿಳಿಸಿದರು.
ಪ್ರಧಾನಿ ಮೋದಿ ಸುಳ್ಳಿನ ಭರವಸೆ ನೀಡುತ್ತಿದ್ದಾರೆ. ಮೋದಿ ಸುಳ್ಳುಗಳಿಗೆ ಯಾರೂ ದಾರಿ ತಪ್ಪಲ್ಲ ಎಂಬ ವಿಶ್ವಾಸವಿದೆ. ನಾವು ರಾಜ್ಯದಲ್ಲಿ 4,530 ಕೋಟಿ ರೂಪಾಯಿ ಶಕ್ತಿ ಯೋಜನೆ ಕೊಟ್ಟಿದ್ದೇವೆ. 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ತಾಕತ್ ಇದ್ದರೆ, ಧಮ್ ಇದ್ದರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಮತನಾಡುತ್ತಾರೆ. ಇದೆಲ್ಲ ಮಾಡಲು ಧಮ್, ತಾಕತ್ತು ಬೇಕಿಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಸಾಕು ಎಂದು ಟಾಂಗ್ ನೀಡಿದರು.
ನಮ್ಮದೇನಿದ್ದರೂ ಬಡವರ ಬಗ್ಗೆ ಬದ್ಧತೆ ಅಷ್ಟೇ. ಧಮ್, ತಾಕತ್ತು ಬಿಜೆಪಿಯವರದ್ದು ಎಂದು ತಿರುಗೇಟು ನೀಡಿದರು.
ಫೆ.7ರಂದು ಬೆಳಿಗ್ಗೆ 11 ಗಂಟೆಯಿಂದ ದೆಅಹಲಿಯಲ್ಲಿ ಧರಣಿ ಆರಂಭವಾಗಲಿದೆ. ಎಲ್ಲಾ ಕಾಂಗ್ರೆಸ್ ನಾಯಕರು, ಸಂಸದರು ಭಾಗಿಯಾಗಬೇಕು. 14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ.42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದಂತೆ ಶೇ.41ರಷ್ಟು ಹಣ ನೀಡಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೇ ಈ ಆಯೋಗಗಳು ರಚನೆಯಾಗಿದ್ದು, ಆದರೂ ರಾಜ್ಯಕ್ಕೆ ನಯಾ ಪೈಸೆ ಹಣ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.