ನವದೆಹಲಿ : ಸುರಕ್ಷತಾ ನಿಯಮ ಉಲ್ಲಂಘಿಸಿದ ಏರ್ ಇಂಡಿಯಾಗೆ 1.1 ಕೋಟಿ ದಂಡ ವಿಧಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸುರಕ್ಷತಾ ಉಲ್ಲಂಘನೆಗಾಗಿ ಈ ಕ್ರಮ ಕೈಗೊಂಡಿದೆ.
ಬೋಯಿಂಗ್ ಬಿ 777 ವಿಮಾನಗಳ ಕಾರ್ಯಾಚರಣೆ ವೇಳೆ ಆಮ್ಲಜನಕಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಸುರಕ್ಷತಾ ಕೈಪಿಡಿಗಳನ್ನು ಅನುಸರಿಸದ ಕಾರಣ ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಏರ್ ಇಂಡಿಯಾ ಕಂಪೆನಿಗೆ ಸುಮಾರು 30 ಲಕ್ಷ ರೂ. ವಿಧಿಸಲಾಗಿತ್ತು.
“ಡಿಜಿಸಿಎ ಹೊರಡಿಸಿದ ಆದೇಶವನ್ನು ನಾವು ಒಪ್ಪುವುದಿಲ್ಲ. ನಾವು ಆದೇಶವನ್ನು ವಿವರವಾಗಿ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಮೇಲ್ಮನವಿ ಸಲ್ಲಿಸುವ ನಮ್ಮ ಹಕ್ಕು ಮತ್ತು ಅದನ್ನು ನಿಯಂತ್ರಕರೊಂದಿಗೆ ತೆಗೆದುಕೊಳ್ಳುವುದು ಸೇರಿದಂತೆ ನಮಗೆ ಲಭ್ಯವಿರುವ ಆಯ್ಕೆಗಳನ್ನು ಪರಿಶೀಲಿಸುತ್ತೇವೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಡಾಂಬರು ರಸ್ತೆಯ ಮೇಲೆ ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಹಿನ್ನೆಲೆ, ಇಂತಹ ಪರಿಸ್ಥಿತಿ ನಿರ್ಮಿಸಿದ ಆರೋಪದ ಮೇರೆಗೆ ಇಂಡಿಗೋ ವಿಮಾನ ಯಾನ ಕಂಪೆನಿಗೆ ಡಿಸಿಎಎಸ್ 1.2 ಕೋಟಿ ರೂ. ದಂಡ ವಿಧಿಸಿತ್ತು. ಪ್ರಯಾಣಿಕರಿಗೆ ಅನಾನುಕೂಲ ಕಲ್ಪಿಸಿದ ಕಾರಣಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೂ 30 ಲಕ್ಷ ರೂ. ದಂಡ ವಿಧಿಸಲಾಗಿತ್ತು.