ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಲು ಸಾಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಾಗಿಲು ಮುಚ್ಚುತ್ತಿವೆ. ಕೋವಿಡ್ ಸಂದರ್ಭದಲ್ಲಿ ತಲೆ ಎತ್ತಿದ್ದ ಹಲವು ಹೈಟೆಕ್ ಆಸ್ಪತ್ರೆಗಳು ಈಗ ಬಂದ್ ಆಗುತ್ತಿವೆ.
ಹೈಟೆಕ್ ಸರ್ಕಾರಿ ಆಸ್ಪತ್ರೆಗಳೇ ಮೂಲೆ ಗುಂಪಾಗುತ್ತಿರುವುದು ವಿಪರ್ಯಾಸ. ಶಿವಾಜಿನಗರದಲ್ಲಿ ಇದ್ದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ, ಸುಸಜ್ಜಿತವಾದ ಮಹಡಿ, ಕಟ್ಟಡ, ವೈದ್ಯರುಗಳಿದ್ದರೂ ಕೂಡ ರೋಗಿಗಳು ಲಕ್ಷ ಲಕ್ಷ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಚರಕ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಕಡಿಮೆಯಾಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದು ಬಾಗಿಲು ಮುಚ್ಚುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ ಮುಂದುವರೆದಿದೆ.
ಚರಕ ಆಸ್ಪತ್ರೆಯಲ್ಲಿ ಹೈಟೆಕ್ ತಂತ್ರಜ್ಞಾನದ ಸೌಲಭ್ಯವಿದ್ದರೂ ಪ್ರಯೋಜನವಾಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಈ ಆಸ್ಪತ್ರೆ ಎರಡು ವರ್ಷಗಳಿಂದ ನಿರುಪಯುಕ್ತವಾಗಿದೆ.
ಆಸ್ಪತ್ರೆಯಲ್ಲಿ ತಲಾ ಇಬ್ಬರು ಶುಷ್ರೂಷಕರು, ಗ್ರೂಪ್ ಡಿ ನೌಕರರು ಹಾಗೂ ರಕ್ಷಣಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಎರಡು ದಿನಗಳಿಂದ ಈ ಸೇವೆಯೂ ನಿಂತಿದೆ. ಆಸ್ಪತ್ರೆ ಸಂಪೂರ್ಣ ಬಂದ್ ಆಗಿದೆ.
ಹೈಟೆಕ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ತಂತ್ರಜ್ಞಾನಗಳಿದ್ದರೂ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಸರ್ಕಾರ ನೇಮಕ ಮಾಡಿಲ್ಲ. ಆಧುನಿಕ ಯಂತ್ರೋಪಕರಣಗಳು ಆಸ್ಪತ್ರೆಯಲ್ಲಿದ್ದರೂ ನಿರ್ವಹಣೆಗೆ ಸಿಬ್ಬಂದಿಗಳಿಲ್ಲದೇ ನಾಶವಾಗುತ್ತಿದೆ. ಕೋವಿಡ್ ವೇಳೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್ ಬಳಿಕ ಒಳರೋಗಿಗಳ ವೈದ್ಯಕೀಯಸೇವೆ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಗೆ ಬೀಗ ಜಡಿದಿರುವ ಸರ್ಕಾರ ಬೇರೆ ಆಸ್ಪತ್ರೆಗೆ ತೆರಳುವಂತೆ ಬೋರ್ಡ್ ಹಾಕಿದೆ.