ಹಳೆಯ ಕಾರುಗಳ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಜನರು ಹಳೆಯ ಕಾರುಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕ ದೊಡ್ಡ ಕಂಪನಿಗಳು ಈ ವ್ಯವಹಾರಕ್ಕೆ ಪ್ರವೇಶಿಸಿವೆ. ಒಬ್ಬ ವ್ಯಕ್ತಿ ತನ್ನ ಹಳೆಯ ಕಾರನ್ನು ಮಾರಿದಾಗ, ಆ ಕಾರಿಗೆ ಉತ್ತಮ ಬೆಲೆಯನ್ನು ಹೇಗೆ ಪಡೆಯುವುದು ಎಂಬುದೇ ಅವರ ಮುಂದಿರುವ ಸವಾಲು. ಕೆಲವೊಂದು ನಿರ್ದಿಷ್ಟ ಸಲಹೆಗಳನ್ನು ಪಾಲಿಸಿದ್ರೆ ನಿಮ್ಮ ಕಾರಿಗೆ ಒಳ್ಳೆ ಬೆಲೆ ಬರುತ್ತದೆ.
ದಾಖಲೆಗಳು- ಕಾರನ್ನು ಮಾರಾಟ ಮಾಡುವ ಆಲೋಚನೆ ನಿಮ್ಮ ಮನಸ್ಸಿಗೆ ಬಂದಾಗ, ನೋಂದಣಿ ಪ್ರಮಾಣಪತ್ರ, ವಿಮೆ, ಸರ್ವೀಸ್ ಹಿಸ್ಟರಿ ಮತ್ತು ಮಾಲಿನ್ಯ ಪ್ರಮಾಣಪತ್ರದಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಮೊದಲು ಸಿದ್ಧವಾಗಿಡಿ. ಗ್ರಾಹಕರಿಗೆ ಆ ದಾಖಲೆಗಳನ್ನು ತೋರಿಸಿ. ಇದರಿಂದ ಖರೀದಿದಾರನು ಸರಿಯಾದ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇನೆಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ.
ಸರ್ವೀಸ್ – ಹಳೆಯ ಕಾರನ್ನು ಒಳ್ಳೆ ಬೆಲೆಗೆ ಮಾರಾಟ ಮಾಡಲು ಬಯಸಿದರೆ ತಪ್ಪದೇ ಸರ್ವೀಸ್ ಮಾಡಿಸಿ. ಗ್ರಾಹಕರು ಕಾರನ್ನು ನೋಡಿ, ಟ್ರಯಲ್ ರನ್ ಕೂಡ ಮಾಡ್ತಾರೆ. ಸರ್ವೀಸ್ ಮಾಡಿಸುವುದರಿಂದ ಕಾರು ಸ್ಮೂತ್ ಆಗಿ ಓಡುತ್ತದೆ. ಕಾರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಖಚಿತವಾದರೆ ಗ್ರಾಹಕರು ನೀವು ಹೇಳಿದ ಬೆಲೆಯನ್ನು ಕೊಟ್ಟು ಖರೀದಿಸಲು ಸಿದ್ಧರಾಗುತ್ತಾರೆ.
ಕಾರನ್ನು ಸ್ವಚ್ಛವಾಗಿಡಿ – ಸುಂದರವಾದ ವಸ್ತುಗಳು ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತವೆ. ಬಳಸಿದ ಕಾರುಗಳ ಮಾರಾಟಕ್ಕೂ ಇದೇ ಸೂತ್ರ ಅನ್ವಯಿಸುತ್ತದೆ. ನಿಮ್ಮ ಹಳೆಯ ಕಾರು ಸ್ವಚ್ಛ ಮತ್ತು ಸುಂದರವಾಗಿ ಕಂಡರೆ ಗ್ರಾಹಕರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಆದ್ದರಿಂದ ಗ್ರಾಹಕರು ಕಾರನ್ನು ನೋಡಲು ಬರುವ ಮೊದಲು ಕಾರನ್ನು ಚೆನ್ನಾಗಿ ತೊಳೆದು ಪಾಲಿಶ್ ಮಾಡಿ ಇರಿಸಿ.
ಬೆಲೆ – ನಿಮ್ಮ ಕಾರಿಗೆ ನೀವು ಯೋಚಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಗ್ರಾಹಕರಿಂದ ಕೇಳಿ. ಕೊನೆಯ ಒಪ್ಪಂದಕ್ಕೂ ಮುನ್ನ ಅವರು ಬೆಲೆ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಈ ಮೂಲಕ ಮೊದಲು ಯೋಚಿಸಿದ ಅದೇ ಬೆಲೆಗೆ ನೀವು ಕಾರನ್ನು ಮಾರಾಟ ಮಾಡಬಹುದು.