ಶಿಮ್ಲಾ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಗೆ ‘ಟು ಫಿಂಗರ್ ಟೆಸ್ಟ್’ ನಡೆಸಿದ ವೈದ್ಯರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಛೀಮಾರಿ ಹಾಕಿದೆ.
ಪಾಲಂಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಡೆಗೆ ಹೈಕೋರ್ಟ್ ಗರಂ ಆಗಿದೆ. ಕಾನೂನುಬಾಹಿರವಾಗಿ ಪರೀಕ್ಷೆ ನಡೆಸಿದ ವೈದ್ಯರಿಗೆ 5 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕೊ ಲೀಗಲ್ ಕೇಸ್ ಆಕೆಯ ಘನತೆಗೆ ಧಕ್ಕೆ ತಂದಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಎ.ಸ್ ಚೌಹಾಣ್ ಮತ್ತು ನ್ಯಾಯಮೂರ್ತಿ ಸತ್ಯೇನ್ ವೈದ್ಯ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ಬಾಲಕಿ ಮೇಲೆ ಮೆಡಿಕೊ ಲೀಗಲ್ ಕೇಸ್ ಪರೀಕ್ಷೆ ನಡೆಸಿದ ವೈದ್ಯರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಮೆಡಿಕೊ ಲೀಗಲ್ ಕೇಸ್ ವರದಿ ಸಂತ್ರಸ್ತೆಯ ಘನತೆಗೆ, ಖಾಸಗಿತನಕ್ಕೆ ಧಕ್ಕೆ ತಂದಿದೆ. ಇಂತಹ ಪರೀಕ್ಷೆ ನಡೆಸಬಾರದು ಎಂದು ಕೋರ್ಟ್ ನಿರ್ದೇಶನ ನೀಡಿದ್ದರೂ, ಪರೀಕ್ಷೆ ನಡೆಸಿದ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಲಾಗಿದೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ಮೆಡಿಕೋ ಲೀಗಲ್ ಕೇಸ್(ಎಂಎಲ್‌ಸಿ) ವರದಿಯು ಅವಮಾನಕರವಾಗಿದೆ ಎಂದು ಪರಿಗಣಿಸಿ, ನ್ಯಾಯಮೂರ್ತಿಗಳಾದ ತರ್ಲೋಕ್ ಸಿಂಗ್ ಚೌಹಾಣ್ ಮತ್ತು ಸತ್ಯೇನ್ ವೈದ್ಯ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪರೀಕ್ಷಿಸಿದ ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಅಂತಹ ಪರೀಕ್ಷೆಯನ್ನು ನಡೆಸದಂತೆ ಎಲ್ಲಾ ವೈದ್ಯಕೀಯ ವೃತ್ತಿಪರರಿಗೆ ನಿರ್ದೇಶನ ನೀಡಿದೆ ಮತ್ತು ಅಂತಹ ಪರೀಕ್ಷೆಯನ್ನು ನಡೆಸುವ ವೈದ್ಯರು ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಿದೆ.