ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 8 ಶಂಕಿತ ಉಗ್ರರ ವಿರುದ್ಧ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೊಯ್ಬಾದ 8 ಶಂಕಿತ ಉಗ್ರರು ರಾಜ್ಯದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಪ್ರಕರಣ ಸಂಬಂಧ 6 ಶಂಕಿತರನ್ನು ಎನ್ ಐ ಎ ಬಂಧಿಸಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಶೋಧಕಾರ್ಯ ತೀವ್ರಗೊಂಡಿದೆ. ಈ ನಡುವೆ 8 ಶಂಕಿತ ಉಗ್ರರ ವಿರುದ್ಧ ಎನ್ ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಇಬ್ಬರು ಶಂಕಿತ ಉಗ್ರರಾದ ಜುನೈದ್ ಹಾಗೂ ಸಲ್ಮಾನ್ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಕೇರಳ ಮೂಲದ ಓರ್ವ ಆರೋಪಿ ನಸೀರ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ಸೈಯದ್ ಸುಲೇಹ್ ಖಾನ್, ಮೊಹಮ್ಮದ್ ಉಮರ್, ಝಹೀದ್ ತಬ್ರೆಜ್, ಸೈಯದ್ ಮುದಾಸಿರ್ ಹಾಗೂ ಫೈಜಲ್ ರಬ್ಬಾನಿ ಹೆಸರು ಚಾರ್ಜ್ ಶೀಟ್ ನಲ್ಲಿದೆ.
8 ಶಂಕಿತ ಉಗ್ರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕ ಸಾಗಣೆ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.