ಗೂಗಲ್, ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಓಗಳಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಭಾರತೀಯ ಮೂಲದ ಟೆಕ್ ಸಿಇಒ ನಿಕೇಶ್ ಅರೋರಾ. ಒಂದು ಕಾಲದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಿಕೇಶ್ ಅರೋರಾ ಈಗ 2024ರಲ್ಲಿ ವಿಶ್ವದ ಹೊಸ ಮತ್ತು ಮೊದಲ ಬಿಲಿಯನೇರ್ ಎನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ನಿಕೇಶ್ ಅರೋರಾ 2024ರ ಮೊದಲ ಬಿಲಿಯನೇರ್.
ನಿಕೇಶ್ ಅರೋರಾ ಸದ್ಯ ಸೈಬರ್ ಸೆಕ್ಯುರಿಟಿ ಕಂಪನಿ ಪಾವೊ ಆಲ್ಟೊ ನೆಟ್‌ವರ್ಕ್ಸ್‌ನ ಸಿಇಓ. ಅವರ ನಿವ್ವಳ ಮೌಲ್ಯವು 1.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಭಾರತೀಯ ಕರೆನ್ಸಿಯಲ್ಲಿ ಈ ಮೊತ್ತ ಅಂದಾಜು 1,24,97,19,00,000 ರೂಪಾಯಿ. 2018 ರಿಂದಲೂ ಪಾವೊ ಆಲ್ಟೊ ನೆಟ್‌ವರ್ಕ್‌ನ ಮುಖ್ಯಸ್ಥರಾಗಿರುವ ನಿಕೇಶ್, ಅದೇ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ.
ಪಾವೊ ಆಲ್ಟೊ ನೆಟ್‌ವರ್ಕ್‌ನ ಷೇರಿನ ಬೆಲೆಯಲ್ಲಿ ಹೆಚ್ಚಳದ ನಂತರ, ನಿಕೇಶ್ ಅರೋರಾ ಅವರ ಷೇರಿನ ಮೌಲ್ಯವು 830 ಮಿಲಿಯನ್ ಡಾಲರ್‌ಗೆ ಏರಿದೆ. ನಿಕೇಶ್ 2012 ರಲ್ಲಿ ಗೂಗಲ್‌ನ ಅತ್ಯಂತ ದುಬಾರಿ ಉದ್ಯೋಗಿ ಎನಿಸಿಕೊಂಡಿದ್ದರು. ಗೂಗಲ್ ಅವರಿಗೆ 51 ಮಿಲಿಯನ್ ಡಾಲರ್ ಪ್ಯಾಕೇಜ್ ನೀಡಿತ್ತು. ಗೂಗಲ್ ಅಲ್ಲದೆ ಸಾಫ್ಟ್ ಬ್ಯಾಂಕ್ ನಲ್ಲೂ ಅವರು ದಾಖಲೆ ಬರೆದಿದ್ದಾರೆ. 2014 ರಲ್ಲಿ ಸಾಫ್ಟ್‌ಬ್ಯಾಂಕ್ ಅವರಿಗೆ 135 ಮಿಲಿಯನ್ ಡಾಲರ್ ಪ್ಯಾಕೇಜ್ ನೀಡಿತು.
ನಿಕೇಶ್ ಅರೋರಾ ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ. ಅವರ ತಂದೆ ವಾಯುಪಡೆಯ ಅಧಿಕಾರಿಯಾಗಿದ್ದರು. ಅವರ ಆರಂಭಿಕ ಶಿಕ್ಷಣ ಏರ್‌ಪೋರ್ಟ್ ಶಾಲೆಯಲ್ಲಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಐಐಟಿ ಪದವಿ ಪಡೆದಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದ ನಂತರ ವಿಪ್ರೋದಲ್ಲಿ ಕೆಲಸ ಮಾಡಿದರು. ನಂತರ ಕೆಲಸ ತೊರೆದು ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವಾಗ ಹಣವಿಲ್ಲದೇ ನಿಕೇಶ್ ಬರ್ಗರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹಗಲು ಕೆಲಸ ಮಾಡಿ ರಾತ್ರಿ ಓದುತ್ತಿದ್ದರು.
ಉದ್ಯೋಗದ ಜೊತೆಜೊತೆಗೆ ಓದನ್ನೂ ಮುಂದುವರಿಸಿದ್ದು ವಿಶೇಷ. ಇದರಿಂದಾಗಿಯೇ ಅವರ ಶಿಕ್ಷಣ ಮತ್ತು ಜೀವನ ವೆಚ್ಚವನ್ನು ನಿರ್ವಹಿಸಲು ಸಾಧ್ಯವಾಯ್ತು. ಈ ಮೂಲಕ ಅವರು ಚಾರ್ಟರ್ಡ್ ಫೈನಾನ್ಶಿಯಲ್ ವಿಶ್ಲೇಷಕರಾಗಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ನಿಕೇಶ್ ಅಮೆರಿಕದಲ್ಲಿ ಓದುತ್ತಿದ್ದಾಗ ಬರ್ಗರ್ ಶಾಪ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದರು, ಜೊತೆಗೆ ಭದ್ರತಾ ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದಾರೆ. ಕಠಿಣ ಪರಿಶ್ರಮದಿಂದ ಬಿಲಿಯನೇರ್ ಪಟ್ಟಕ್ಕೇರಿರುವ ನಿಕೇಶ್ ಅರೋರಾ ಅವರ ಸಾಧ್ಯನೆ ನಿಜಕ್ಕೂ ಮಾದರಿ.