ನವದೆಹಲಿ: ಕೇಂದ್ರ ಸರ್ಕಾರ ತೊಗರಿ ಮತ್ತು ಉದ್ದಿನಬೇಳೆಗೆ ನೀಡಿದ್ದ ಆಮದು ಸುಂಕ ವಿನಾಯಿತಿಯನ್ನು ಮಾರ್ಚ್ 31, 2025 ರವರೆಗೆ ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಅಕ್ಟೋಬರ್ 2021 ರಿಂದ ಜಾರಿಯಲ್ಲಿದ್ದು, ವಿದೇಶಿ ವ್ಯಾಪಾರದ ಮಹಾನಿರ್ದೇಶಕರು(ಡಿಜಿಎಫ್‌ಟಿ) ಹೊರಡಿಸಿರುವ ಆದೇಶದ ಪ್ರಕಾರ, ಇದು ಮಾರ್ಚ್ 31, 2025 ರವರೆಗೆ ಮುಂದುವರಿಯುತ್ತದೆ.
ಬೇಳೆಕಾಳುಗಳ ಬೆಲೆಗಳು ನವೆಂಬರ್‌ನಲ್ಲಿ ಶೇಕಡ 20 ರಷ್ಟು ಹಣದುಬ್ಬರ ಕಂಡಿವೆ. ಇತ್ತೀಚೆಗೆ, ಕೇಂದ್ರವು ಮಸೂರ್ ದಾಲ್‌ಗೆ ಆಮದು ಸುಂಕ ವಿನಾಯಿತಿಯನ್ನು ಒಂದು ವರ್ಷದವರೆಗೆ ಮಾರ್ಚ್ 2025 ಕ್ಕೆ ವಿಸ್ತರಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಕೇಂದ್ರ ಸರ್ಕಾರದ ಉಚಿತ ಧಾನ್ಯ ವಿತರಣಾ ಕಾರ್ಯಕ್ರಮವನ್ನು ಐದು ವರ್ಷಗಳ ಅವಧಿಗೆ 2028 ಕ್ಕೆ ವಿಸ್ತರಿಸಲಾಗಿದೆ. ಯೋಜನೆಯ ನಿಬಂಧನೆಯ ಅಡಿಯಲ್ಲಿ, ಬಡ ಕುಟುಂಬಗಳಿಗೆ ಮಾಸಿಕ ಆಧಾರದ ಮೇಲೆ 5 ಕೆಜಿ ಧಾನ್ಯಗಳನ್ನು ನೀಡಲಾಗುತ್ತದೆ.
ದೇಶೀಯ ಉತ್ಪಾದನೆಯಲ್ಲಿನ ಕುಸಿತವು ಈ ಹಿಂದೆ ತೊಗರಿ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ನವೆಂಬರ್‌ನಲ್ಲಿ 156.5 ರಿಂದ ಡಿಸೆಂಬರ್‌ನಲ್ಲಿ ಕೆಜಿಗೆ 154 ರೂ.ಗೆ ಸ್ಥಿರವಾಗಿದೆ. ದೇಶೀಯ ಉತ್ಪಾದನೆಯಲ್ಲಿ ಕುಸಿತ ನಿರೀಕ್ಷಿಸಿ, ಕೇಂದ್ರ ಸರ್ಕಾರ ಜನವರಿಯಲ್ಲಿ ಸುಂಕ ರಹಿತ ಆಮದು ನೀತಿಯನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಿತು.