ಹುಮನಾಬಾದ್: ಹುಮನಾಬಾದ್ ಪಟ್ಟಣದ ಖಾಸಗಿ ಶಾಲೆ ಶಿಕ್ಷಕನೊಬ್ಬ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬಟ್ಟೆ ತೆಗೆಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಈ ಕುರಿತಾಗಿ ಹುಮನಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಲೆಯ ಅವಧಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಮನೆಗೆ ಹೋಗದಂತೆ ತಡೆದು ಪ್ಯಾಂಟ್, ಚಡ್ಡಿ ತೆಗೆಸಿ ಶಾಲಾ ಆವರಣದಲ್ಲಿ ಓಡಾಡಿಸಿದ ದೈಹಿಕ ಶಿಕ್ಷಕ ಈ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಹಿಂಸೆ ನೀಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ, ಬಿಇಒ ವೆಂಕಟೇಶ ಗುಡಾಳ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.