
ಬೆಂಗಳೂರು: ಆರೋಪಿಗಳ ಜಾಮೀನಿಗಾಗಿ ನಕಲಿ ಶೂರಿಟಿ ನೀಡಿದ್ದ 9 ಮಂದಿಯನ್ನು ಬಂಧಿಸಲಾಗಿದೆ. ಆಧಾರ್ ಕಾರ್ಡ್, ಸ್ವತ್ತಿನ ದಾಖಲೆ ನಕಲು ಮಾಡಿ ಭದ್ರತಾ ಠೇವಣಿ ಇಡುತ್ತಿದ್ದರು. ಹಲವು ವರ್ಷಗಳಿಂದ ಇದೆ ಕೃತ್ಯವೆಸಗಿದ್ದ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ವೀರೇಶ್, ಅಮರೇಶ್, ಕೊಪ್ಪಳ ಜಿಲ್ಲೆಯ ಉಮೇಶ್ ಕುಮಾರ್, ಸಂತೋಷ್, ಮಾದವಾರದ ಪ್ರಕಾಶ್, ಮೈಸೂರು ಜಿಲ್ಲೆಯ ಉಮೇಶ್, ಕೋಲಾರ ಜಿಲ್ಲೆಯ ನಾಗರಾಜ, ಆರ್. ಮಂಜುನಾಥ, ಚಾಮುಂಡಿ ನಗರದ ತಬಸಂ ಬಂಧಿತ ಆರೋಪಿಗಳು.
ಆರೋಪಿಗಳಿಂದ 30 ನಕಲಿ ಆಧಾರ್ ಕಾರ್ಡ್ ಮತ್ತು ಸ್ವತ್ತಿನ ದಾಖಲೆ ಜಪ್ತಿ ಮಾಡಲಾಗಿದೆ. ಆರೋಪಿಗಳಿಗೆ ಜಾಮೀನು ಪಡೆಯಲು ನಕಲಿ ಸೃಷ್ಟಿಸಿ ನೀಡುತ್ತಿರುವ ಬಗ್ಗೆ ಸಿಸಿಬಿ ಸಂಘಟಿತ ಅಪರಾಧ ದಳದ ಇನ್ಸ್ಪೆಕ್ಟರ್ ಬಾಲಾಜಿ ತಂಡಕ್ಕೆ ಸುಳಿವು ಸಿಕ್ಕಿದ್ದು, ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಜೆರಾಕ್ಸ್ ಅಂಗಡಿಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಒಂದೇ ಆಧಾರ್ ಕಾರ್ಡ್ ಗೆ ಬೇರೆ ಬೇರೆ ನಂಬರ್ ಗಳನ್ನು ಅಂಟಿಸುತ್ತಿದ್ದ ಇವರು ಜೆರಾಕ್ಸ್, ಸೈಬರ್ ಸೆಂಟರ್ ಗಳಲ್ಲಿ ತಿದ್ದುಪಡಿ ಮಾಡಿ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆರೋಪಿಗಳಿಗೆ ನೀಡುತ್ತಿದ್ದರು. ಇದಕ್ಕಾಗಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೂ ಹಣ ಪಡೆಯುತ್ತಿದ್ದರು.