ಹೈದರಾಬಾದ್: ಶಿಷ್ಠಾಚಾರ ಉಲ್ಲಂಘನೆ ಆರೋಪದಲ್ಲಿ ತೆಲಂಗಾಣ ಡಿಜಿ & ಐಜಿಪಿ ಅಂಜನಿ ಕುಮಾರ್ ಅವರನ್ನು ಅಮಾನತು ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದತ್ತ ದಾಪುಗಾಲಿಡುತ್ತಿದ್ದಂತೆ ರಾಜ್ಯದಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಗೆಲುವು ಖಚಿತ ಎಂಬುದು ಗೊತ್ತಾಗುತ್ತಿದ್ದಂತೆ ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಗಳೇ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದರು.
ಕಾಂಗ್ರೆಸ್ ಗೆಲುವಿನ ಬಗ್ಗೆ ಹಾಗೂ ನೂತನ ಮುಖ್ಯಮಂತ್ರಿ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಡಿಜಿ-ಐಜಿಪಿ ಅಂಜನಿ ಕುಮಾರ್ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಹೂಗುಚ್ಛ ನೀಡಿ ಶುಭ ಕೋರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ, ವಿಡಿಯೋ ವೈರಲ್ ಆಗಿತ್ತು. ಸ್ವತ: ಡಿಜಿ-ಐಜಿಪಿಯವರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದು ಅಂಜನಿ ಕುಮಾರ್ ಅವರನ್ನು ಡಿಜಿ & ಐಜಿಪಿ ಹುದ್ದೆಯಿಂದ ಸಸ್ಪೆಂಡ್ ಮಾಡಿ ಆದೇಶ ನೀಡಿದೆ.