ಬೆಂಗಳೂರು: ಯಾರು ಎಷ್ಟೇ ವಿರೋಧಿಸಿದರೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಜನಗಣತಿ ವರದಿ ಸ್ವೀಕರಿಸುವ ತೀರ್ಮಾನದಿಂದ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಯೋಗ ಸಿದ್ದಪಡಿಸಿದ್ದ ಜನಗಣತಿ ವರದಿ ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವರದಿಯನ್ನು ವಿರೋಧಿಸಿ ಸಹಿ ಸಂಗ್ರಹಿಸುವುದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಒಕ್ಕಲಿಗ ಸಮುದಾಯದ ನಾಯಕರ ನಿಯೋಗ ನನ್ನನ್ನು ಭೇಟಿಯಾಗಿ ಕಾಂತರಾಜು ವರದಿ ಸ್ವೀಕರಿಸದಂತೆ ಕೋರಿದೆ. ವರದಿಯಲ್ಲಿ ಏನಿದೆ ಎಂದು ಗೊತ್ತೇ ಎನ್ನುವ ಪ್ರಶ್ನೆಗೆ ಆ ನಾಯಕರ ಬಳಿ ಉತ್ತರವಿರಲಿಲ್ಲ ಎಂದು ಹೇಳಿದ್ದಾರೆ. ವರದಿ ಸಲ್ಲಿಕೆಯಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದು ನಂತರ ನಿರ್ಧಾರ ಮಾಡಲಾಗುವುದು. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.