ಹಣ ಸಂಪಾದನೆ ಮಾಡೋದು ಮಾತ್ರ ಮುಖ್ಯವಲ್ಲ. ಅದರ ನಿರ್ವಹಣೆ ಹೇಗೆ ಎಂಬುದು ಗೊತ್ತಿರಬೇಕು. ಅನೇಕರು ಹಣ ಸಂಪಾದನೆ ಮಾಡ್ತಾರೆ, ಆದ್ರೆ ಸರಿಯಾಗಿ ಅದರ ಬಳಕೆ ಮಾಡೋದಿಲ್ಲ. ಬೇಕಾಬಿಟ್ಟಿ ಹಣ ಖರ್ಚು ಮಾಡುವ ಜನರು ಸಂಕಷ್ಟದ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕ್ತಾರೆ. ಎಷ್ಟೇ ಸಂಬಳ ಬರ್ತಿದ್ದರೂ ತಿಂಗಳ ಕೊನೆಯಲ್ಲಿ, ತುರ್ತು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಮಗೂ ಈ ಸ್ಥಿತಿ ಬರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.
ಅಗತ್ಯಕ್ಕಿಂತ ಹೆಚ್ಚು ಖರ್ಚು : ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆಯಿದೆ. ಅದನ್ನು ಮೀರಿ ನಡೆದರೆ ಸಮಸ್ಯೆ ಶುರುವಾಗುತ್ತದೆ. ಸಾಲಕ್ಕೂ ಇದು ಅನ್ವಯಿಸುತ್ತದೆ. ನಿಮ್ಮ ಖರ್ಚು ಹೆಚ್ಚಾದಂತೆ ಸಾಲ ಹೆಚ್ಚಾಗುತ್ತದೆ. ಸಾಲದಿಂದ ಅನೇಕ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಪ್ರತಿ ವಸ್ತು ಖರೀದಿಗೆ ಮುನ್ನ ಅದರ ಅಗತ್ಯ ಎಷ್ಟಿದೆ, ನಿಮ್ಮ ಬಳಿ ಹಣವಿದ್ಯಾ ಎಂಬುದನ್ನು ಪರಿಶೀಲಿಸಿ ಖರೀದಿ ಮಾಡಿ. ಇಎಂಐ ಸೌಲಭ್ಯವಿದೆ ಎನ್ನುವ ಕಾರಣಕ್ಕೆ ಅನಗತ್ಯ ವಸ್ತು ಖರೀದಿ ಮಾಡಿ ಸಾಲ ಮೈಮೇಲೆ ಎಳೆದುಕೊಳ್ಳಬೇಡಿ.
ತುರ್ತು ನಿಧಿ : ಪ್ರತಿಯೊಬ್ಬರೂ ತುರ್ತು ನಿಧಿ ಹೊಂದಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಈ ಹಣ ನೆರವಿಗೆ ಬರುತ್ತದೆ. ತಿಂಗಳ ಸಂಬಳದಲ್ಲಿ ಅಥವಾ ನಿಮ್ಮ ಆದಾಯದಲ್ಲಿ ಒಂದು ಭಾಗವನ್ನು ತುರ್ತು ನಿಧಿಯಲ್ಲಿ ಉಳಿತಾಯ ಮಾಡಬೇಕು. ಅದನ್ನು ಯಾವುದೇ ಸಮಯದಲ್ಲಿ ತೆಗೆಯಬಾರದು.
ವಿಮೆ ಅಗತ್ಯ : ವೈದ್ಯಕೀಯ ತುರ್ತುಸ್ಥಿತಿ, ಅಪಘಾತ ಅಥವಾ ಸಾವಿನಂತಹ ಅನಿರೀಕ್ಷಿತ ಘಟನೆಗಳಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಬಾರದು ಅಂದ್ರೆ ನೀವು ವಿಮೆ ಹೊಂದಿರಬೇಕು. ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸ ಮತ್ತು ಅಗತ್ಯಗಳನ್ನು ಪರಿಗಣಿಸಿ ಮತ್ತು ನಿಮ್ಮ ವಾರ್ಷಿಕ ಆದಾಯಕ್ಕಿಂತ ಕನಿಷ್ಠ ಶೇಕಡಾ 50ರಷ್ಟು ಹೆಚ್ಚಿನ ಆರೋಗ್ಯ ರಕ್ಷಣೆಯನ್ನು ಪಡೆಯಿರಿ.
ನಿವೃತ್ತಿ ಯೋಜನೆ : ನಿವೃತ್ತಿ ಆದ್ಮೇಲೆ ಆರ್ಥಿಕ ಸ್ಥಿತಿ ಬಗ್ಗೆ ಮರಗುವ ಬದಲು, ಮೊದಲೇ ನಿವೃತ್ತಿ ಬಗ್ಗೆ ಆಲೋಚನೆ ಮಾಡಿ. ಅದಕ್ಕೆ ಅಗತ್ಯವಿರುವ ಹಣವನ್ನು ನಿವೃತ್ತಿ ಯೋಜನೆಯಲ್ಲಿ ವಿನಿಯೋಗಿಸಿ.