ಕತ್ತೆ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಅನ್ನೋ ಮಾತಿದೆ. ಅನೇಕರು ಮನೆಮನೆಗೆ ಬಂದು ಕತ್ತೆ ಹಾಲು ಮಾರಾಟ ಮಾಡ್ತಾರೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕಿಲಾರಿ ಪ್ರದೇಶದಲ್ಲಿರುವ ಈ ಕತ್ತೆಯ ಹಾಲು ಅತ್ಯಂತ ದುಬಾರಿ. ಅದರ ಪ್ರಯೋಜನ ತಿಳಿದ ಜನರು ಒಂದೆರಡು ಚಮಚ ಹಾಲಿಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಿದ್ದಾರೆ.
ಈ ವಿಶಿಷ್ಟ ಕತ್ತೆ ಹಾಲಿನ ಬೆಲೆ ಒಂದು ಲೀಟರ್ಗೆ 20 ಸಾವಿರ ರೂಪಾಯಿ. ಹಾಗಾಗಿ ಒಂದು ಲೀಟರ್ ಖರೀದಿಸುವುದು ಹಾಗಿರಲಿ ಜನರು 100 ಎಂಎಲ್ನ ಸಣ್ಣ ಪ್ಯಾಕೆಟ್ಗಳನ್ನು ಕೊಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಹಾಲು ಯಾಕೆ ಇಷ್ಟು ದುಬಾರಿ ಅನ್ನೋದೇ ಇಂಟ್ರೆಸ್ಟಿಂಗ್ ಸಂಗತಿ.
ಈ ಕತ್ತೆಯ ಹೆಸರು ಜೆನ್ನಿ. ಇದರ ಹಾಲು ಕೆಮ್ಮು, ಕಫ ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಜನರು ಅದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ನೇರವಾಗಿ ದೇಶೀಯ ಮಾರುಕಟ್ಟೆಯಲ್ಲಿಯೂ ಕತ್ತೆ ಹಾಲು ಮಾರಾಟವಾಗುತ್ತಿದೆ. ಲಾತೂರ್ ಹೊರತುಪಡಿಸಿ, ದೇಶದ ಹಲವು ನಗರಗಳಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ.
ಕೃಷಿ ವಿಜ್ಞಾನಿಗಳು ಕೂಡ ಕತ್ತೆ ಹಾಲಿನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ರೈತರಿಗೆ ಸಹಾಯ ಮಾಡಲು ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಹಿಸಾರ್, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕತ್ತೆ ಹಾಲಿನ ಕುರಿತು ಸಂಶೋಧನೆ ನಡೆಸಲಾಗಿದೆ.
ಕತ್ತೆ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದಂತೆ. ನೆಗಡಿ, ಕೆಮ್ಮು, ನಾಯಿಕೆಮ್ಮು ಮತ್ತು ನ್ಯುಮೋನಿಯಾವನ್ನು ಉಂಟುಮಾಡುವುದಿಲ್ಲ ಅನ್ನೋದು ಮಾಲೀಕರ ಅಭಿಪ್ರಾಯ. ಕತ್ತೆ ಹಾಲು ಮಕ್ಕಳಲ್ಲಿ ಇಂತಹ ಕಾಯಿಲೆಗಳನ್ನು ತಡೆಯುತ್ತದಂತೆ.
ಕೊಚ್ಚಿ ಮತ್ತು ಪುಣೆಯಲ್ಲಿ ಕೂಡ ಕತ್ತೆ ಹಾಲಿಗೆ ಬೇಡಿಕೆ ಕಂಡುಬರುತ್ತಿದೆ. ಈ ಹಾಲಿನಿಂದ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಕಂಪನಿಗಳು ಕತ್ತೆ ಹಾಲಿನಿಂದ ಮಹಿಳೆಯರಿಗಾಗಿ ಕ್ರೀಮ್, ಸಾಬೂನು ಮತ್ತು ಶಾಂಪೂಗಳನ್ನು ತಯಾರಿಸುತ್ತಿವೆ. ಕತ್ತೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಕೂಡ ಸಾಕಷ್ಟು ದುಬಾರಿಯಾಗಿದೆ. ಉದಾಹರಣೆಗೆ 200 ಮಿಲಿ ಶಾಂಪೂಗೆ 2400 ರೂಪಾಯಿ, 90 ಗ್ರಾಂ ಸಂಧಿವಾತದ ಕ್ರೀಮ್ಗೆ 4840 ರೂಪಾಯಿ ಈ ರೀತಿ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ.
ಹೆಂಗಸರು ಕತ್ತೆ ಹಾಲು ಬಳಸುವುದನ್ನು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಎರಡು ಸಾವಿರ ವರ್ಷಗಳ ಹಿಂದೆಯೂ ಬಳಸಲಾಗುತ್ತಿತ್ತು. ತನ್ನ ಸೌಂದರ್ಯಕ್ಕೆ ಹೆಸರಾಗಿದ್ದ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಕೂಡ ಕತ್ತೆ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ.