ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾಜಿ ಉದ್ಯೋಗಿಯೊಬ್ಬರು ಬೆಂಗಳೂರಿನ ಟಿಸಿಎಸ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಹಿಳೆಯನ್ನು ಬೆಳಗಾವಿಯ ಶಾಹು ನಗರದ ನಿವಾಸಿ ಶ್ರುತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಎರಡನೇ ಬಾರಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಕಂಪನಿಯು ತನ್ನನ್ನು ನೇಮಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ತನ್ನ ತಾಯಿಯ ಫೋನ್ ನಿಂದ ಹುಸಿ ಮಾಡಿದ್ದಾಗಿ ಶ್ರುತಿ ಒಪ್ಪಿಕೊಂಡಿದ್ದಾರೆ.
ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕ್ಯಾಂಪಸ್ ನಿಂದ ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿತ್ತು. ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಟಿಸಿಎಸ್ ಕ್ಯಾಂಪಸ್ ಒಳಗೆ ಕೆಲಸ ಮಾಡುತ್ತಿದ್ದ ಎಲ್ಲ ಉದ್ಯೋಗಿಗಳನ್ನು ಹೊರಗೆ ಕಳುಹಿಸಲಾಗಿದೆ. ಬಾಂಬ್ ಬೆದರಿಕೆ ಕರೆ ಬಗ್ಗೆ ಕಚೇರಿ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ನಾಯಿಗಳೊಂದಿಗೆ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ತಪಾಸಣೆಯ ನಂತರ ಕಚೇರಿಯೊಳಗೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.