alex Certify ಸಹಕಾರಿ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು : ಸಚಿವ ಕೆ.ಎನ್.ರಾಜಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಕಾರಿ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು : ಸಚಿವ ಕೆ.ಎನ್.ರಾಜಣ್ಣ

ಶಿವಮೊಗ್ಗ : ದೇಶದಲ್ಲಿ ನವರತ್ನ ಕಾರ್ಖಾನೆಗಳನ್ನು ಆರಂಭಿಸಿದ ಕೀರ್ತಿಗೆ ಬಾಜನರಾದ ಪ್ರಪ್ರಥಮ ಪ್ರಧಾನಮಂತ್ರಿ ಜವಹರಲಾಲ್ ನೆಹರೂರವರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾದುದು. ಅವರು ನೀಡಿದ ಮಾರ್ಗದರ್ಶನ ಮತ್ತು ಅವರ ಜೀವನಾದರ್ಶಗಳು ಇಂದಿನ ಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.

ಅವರು ನಿನ್ನೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023ರ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಹಕಾರಿ ಕ್ಷೇತ್ರದ ಕ್ರಾಂತಿಗೆ ಮುನ್ನುಡಿ ಬರೆದ, ವಿಶ್ವಕ್ಕೆ ವಿಶ್ವಮಾನವ ಸಂದೇಶ ಸಾರಿದ ಹಿರಿಯ ಮಾನವತಾವಾದಿಗಳ ಪುಣ್ಯಭೂಮಿ ಶಿವಮೊಗ್ಗ ಎಂದ ಅವರು, ಸಹಕಾರಿ ಕ್ಷೇತ್ರವನ್ನು ರಾಷ್ಟ್ರಕ್ಕೆ ಪರಿಚಯಿಸಿದ ಬಿ.ಎಸ್.ವಿಶ್ವನಾಥನ್ರವರು ಶಿವಮೊಗ್ಗ ಜಿಲ್ಲೆಯವರು ಎಂಬುದೇ ಹೆಮ್ಮೆಯ ಸಂಗತಿಯಾಗಿದೆ ಎಂದರು. ಸಹಕಾರಿ ಕ್ಷೇತ್ರ ಸೀಮಿತಗೊಳ್ಳದೇ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನಾಂದೋಲನವಾಗಿ ರೂಪುಗೊಳ್ಳಬೇಕು. ರಾಜ್ಯದ ಪ್ರತಿಯೊಬ್ಬರೂ ಸಹಕಾರಿ ಸಂಘಗಳ ಸದಸ್ಯತ್ವ ಪಡೆದು, ಸಹಕಾರಿ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕು. ಜನಸಾಮಾನ್ಯರು ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ನಡೆಸುವಂತಾಗಲು ಸಹಕಾರಿ ಕ್ಷೇತ್ರ ಪೂರಕವಾಗಿದೆ ಎಂದರು.

ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಸಹಕಾರ ಸಂಸ್ಥೆಗಳು ಪೂರಕವಾಗಿರಲಿವೆ. ಅದು ದೇಶದ ಆರ್ಥಿಕ ಗುರಿ ಹೊಂದಲು ಅನುಕೂಲ ವಾತಾವರಣ ನಿರ್ಮಿಸಲಿದೆ ಎಂದ ಅವರು, ಸಹಕಾರಿ ಕ್ಷೇತ್ರಕ್ಕೆ ಎಲ್ಲರಲ್ಲೂ ಕರೆತರುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ/ಜನಾಂಗದ ಪ್ರತಿನಿಧಿಗಳ ಸದಸ್ಯ ಶುಲ್ಕವನ್ನು ಸರ್ಕಾರವೇ ಭರಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. ಜನರ ಸಂಕಷ್ಟಗಳಿಗೆ ಸಕಾಲಿಕವಾಗಿ ಸ್ಪಂದಿಸುವ ಶಕ್ತಿ ಸಹಕಾರಿಗಳಿಗಿದೆ ಎಂದರು. ಸಹಕಾರಿ ಕ್ಷೇತ್ರದಲ್ಲಿ ಸಾರ್ವಜನಿಕ ಸೇವೆ ವಿಫುಲ ಅವಕಾಶಗಳಿದ್ದು, ಈ ಸೇವೆಯಿಂದ ಉತ್ತಮ ಕೆಲಸ ಮಾಡಿದ ತೃಪ್ತಿ ದೊರೆಯಲಿದೆ. ರಾಜಕೀಯ ಬಿಟ್ಟರೂ ಸಹಕಾರಿ ಕ್ಷೇತ್ರ ಬಿಡಲಾಗದು ಎಂದ ಅವರು, ಪತ್ತಿನ ವ್ಯವಸ್ಥೆ ಜೊತೆಗೆ ಹೈನುಗಾರಿಕೆಗೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ರೈತರು ಕೃಷಿ ಜೊತೆಗೆ ಇತರ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ಅಗತ್ಯವಿರುವ ನೆರವನ್ನು ಸಹಕಾರಿ ಬ್ಯಾಂಕುಗಳು ನೀಡಲಿವೆ. ಇದರಿಂದಾಗಿ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸಹಕಾರಿ ಸಂಘಗಳಿಗೂ ಬಲ ತುಂಬಲಿದೆ ಎಂದರು.

ಎಲ್ಲ ಕ್ಷೇತ್ರಗಳಂತೆ ಸಹಕಾರಿ ಕ್ಷೇತ್ರವೂ ಕೂಡ ನ್ಯೂನತೆಗಳಿಂದ ಹೊರತಾಗಿಲ್ಲ. ಸಹಕಾರಿ ಹಣ ಸರ್ಕಾರದ್ದಲ್ಲ. ಅದು ಜನರ ಠೇವಣಿಯೇ ಆಗಿರುತ್ತದೆ ಎಂಬ ಸಾಮಾನ್ಯ ಜ್ಞಾನ ಎಲ್ಲರೂ ಹೊಂದಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 50,000ಕೋ.ರೂ.ಗಳನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿ ಈ ಹಣ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ವಿತರಣೆಯಾಗಲಿದೆ ಎಂದರು. ರಾಜ್ಯದ ಎಲ್ಲಾ ಮುಜರಾಯಿ ಶಾಖೆಗಳ ಆರ್ಥಿಕ ವ್ಯವಹಾರ ಸಹಕಾರಿ ಬ್ಯಾಂಕುಗಳಲ್ಲೆ ಆಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಅಲ್ಲದೇ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆರ್ಥಿಕ ವ್ಯವಹಾರವನ್ನು ಸಹಕಾರಿ ಸಂಘಗಳಲ್ಲೇ ನಡೆಸುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದ ಅವರು, ಬ್ಯಾಂಕುಗಳ ಶಕ್ತಿಯನ್ನು ಹೆಚ್ಚಿಸುವ ಕ್ರಮವಾಗಿ ಬ್ಯಾಂಕುಗಳಲ್ಲಿ ಠೇವಣಿ ಮೊತ್ತವನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿದೆ ಎಂದರು. ರಾಜ್ಯದ ಸಹಕಾರಿ ಬ್ಯಾಂಕುಗಳ ಆರ್ಥಿಕ ಶಕ್ತಿಯನ್ನು ಕುಂದಲು ಬಿಡದೇ ಪುನರುಜ್ಜೀವನಗೊಳಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಸಾಲ ಪಡೆಯಲು ಅರ್ಹರಿರುವ ಎಲ್ಲಾ ರೈತರಿಗೆ ಸಾಲ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಜನರ ಆರ್ಥಿಕ ಶಕ್ತಿಯನ್ನು ವೃದ್ಧಿಸುವಂತೆ ಮಾಡಲು, ಅವರು ಸ್ವಾಭಿಮಾನದ ನೆಮ್ಮದಿಯ ಬದುಕನ್ನು ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಮಾತನಾಡಿ, ಸರ್ಕಾರಕ್ಕೆ ಪರ್ಯಾಯವಾಗಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಗ್ರಾಮೀಣ ಕುಶಲಕರ್ಮಿಗಳ ಕುಲಕಸುಬುಗಳಿಗೆ ಉತ್ತೇಜನ ನೀಡಿ, ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ವಿಶೇಷವಾಗಿ ಜೇನುಸಾಕಾಣಿಕೆ, ರೇಷ್ಮೇ ಕೃಷಿಗೆ ಉತ್ತೇಜನ ನೀಡಬೇಕಾಗಿದೆ. ಸಹಕಾರಿ ಬ್ಯಾಂಕುಗಳು ಜನಸಾಮಾನ್ಯರಿಗೆ ತಲುಪಲು ಹೆದ್ದಾರಿಯಂತೆ ಕಾರ್ಯನಿರ್ವಹಿಸುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಸಹಕಾರಿಗಳು ತಮ್ಮ ಸಾಧನೆಯನ್ನು ಹೇಳಿ, ಸಂಭ್ರಮಿಸಿ ಎಂದು ಸಹಕಾರಿಗಳಿಗೆ ಕಿವಿಮಾತು ಹೇಳಿದರು. ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ಮತ್ತಿತರ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರ ಕ್ಷೇತ್ರ ಪ್ರಮುಖವಾಗಿದೆ. ಸಹಕಾರ ಸಂಘಗಳ ನಿರ್ದೇಶಕರು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕು. ಸಹಕಾರ ಸಂಸ್ಥೆಗಳ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆಯಬೇಕೆಂದವರು ನುಡಿದರು.

, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಶಾಸಕ ಸಂಗಮೇಶ್ವರ ಬಿ.ಕೆ. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಸಹಕಾರ ಸಂಘಗಳ ನಿಬಂಧಕರು ಕ್ಯಾ.ಡಾ|| ಕೆ.ರಾಜೇಂದ್ರ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಡಾ|| ಆರ್.ಎಂ.ಮಂಜುನಾಥಗೌಡ ಅವರು ಉಪಸ್ಥಿತರಿದ್ದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...