ಬೆಂಗಳೂರು : ಬೆಂಗಳೂರು ನಗರದಿಂದ 60-80 ಕಿ.ಮೀ. ದೂರದಲ್ಲಿ ವಿಶ್ವ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ, ಮತ್ತು ಸಂಶೋಧನಾ ನಗರವನ್ನು (ಕೆಎಚ್‌ಐಆರ್ ಸಿಟಿ) ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ಸುಮಾರು ₹40 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ ಇದ್ದು, ಸುಮಾರು 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಜಗತ್ತಿನ ಅತ್ಯುತ್ತಮ ಕಂಪನಿಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್, ಆಸ್ಪತ್ರೆ, ಆರ್ & ಡಿ ಕೇಂದ್ರಗಳು, ಆಧುನಿಕ ಸ್ಟಾರ್ಟಪ್ಸ್, ಕೆಎಚ್‍ಐಆರ್ ಸಿಟಿಯಲ್ಲಿ ಇರಲಿವೆ. ಒಟ್ಟು ಎರಡು ಹಂತಗಳಲ್ಲಿ ಇದನ್ನು ತಲಾ 1 ಸಾವಿರ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನೆಯು ಸಾಕಾರಗೊಂಡರೆ 1 ಲಕ್ಷ ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಉತ್ಪತ್ತಿಯಾಗಲಿದ್ದು, ರಾಜ್ಯದ ಜಿಡಿಪಿಗೆ 5%ರಷ್ಟು ಕೊಡುಗೆ ಇದರಿಂದ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಎಚ್ಐಆರ್ ಸಿಟಿಯಲ್ಲಿ ಆರೋಗ್ಯ ಕ್ಷೇತ್ರದ ಕಂಪನಿಗಳು, ವೈದ್ಯಕೀಯ ಕೇಂದ್ರಗಳು, ರಿಯಲ್ ಎಸ್ಟೇಟ್, ಹೂಡಿಕೆದಾರರು ಮತ್ತು ವಿಮಾ ಕಂಪನಿಗಳ ನಡುವೆ ಸಹಭಾಗಿತ್ವಕ್ಕೆ ಒತ್ತು ಇರಲಿದೆ. ಇದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಉತ್ಕಷ್ಠತೆಯ ಮಾನದಂಡವಾಗಿ ಗುರುತಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.