ಅತ್ತೆ ಸೊಸೆ ಎಂದರೆ ಸಾಮಾನ್ಯವಾಗಿ ಹೊಂದಾಣಿಕೆ ಇಲ್ಲದ, ಸಾಮರಸ್ಯದ ಕೊರತೆ ಇರುವ ಇಬ್ಬರು ಹೆಂಗಸರ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಅತ್ತೆಯನ್ನು ಅಮ್ಮ ಎಂದು ಭಾವಿಸಿ, ಸೊಸೆಯನ್ನು ಮಗಳು ಎಂದು ನೋಡಲು ಸಾಧ್ಯವಾದರೆ ಎಷ್ಟೋ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಕ್ಕ ಹಾಗೆಯೇ.
ದೃಷ್ಟಿಯಂತೆ ಸೃಷ್ಠಿ ಎಂಬ ಮಾತಿದೆ. ನಾವು ನೋಡುವ, ಮನಸ್ಸಿನಲ್ಲಿ ಭಾವಿಸುವ ರೀತಿಯೇ ಅಂತಿಮ. ಅತ್ತೆ – ಸೊಸೆ, ಅಮ್ಮ – ಮಗಳಂತೆ ಇರಲು ಕೆಲವು ಉಪಯುಕ್ತ ಸಲಹೆ ಇಲ್ಲಿದೆ.
* ಸೊಸೆ ತನ್ನ ಅತ್ತೆಯನ್ನು ಅಮ್ಮನ ಜಾಗದಲ್ಲೇ ಭಾವಿಸುವುದು ಬಹಳ ಮುಖ್ಯ. ಅತ್ತೆ ಕೊಡುವ ಸಲಹೆ ಸೂಚನೆಗಳನ್ನು ಕಿರಿಕಿರಿ ಎಂದು ಭಾವಿಸದೆ, ಇದೇ ಸಲಹೆ ತನ್ನ ಅಮ್ಮ ಹೇಳಿದರೆ ಯಾವ ರೀತಿ ಭಾವಿಸುತ್ತಿದ್ದೆ ಎಂದು ಯೋಚಿಸಿ ಮುಂದುವರಿಯುವುದು ಒಳ್ಳೆಯದು.
* ಅತ್ತೆಗೆ ಸಹಜವಾಗಿ ಅನುಭವ ಹೆಚ್ಚು. ಅನುಭವದಿಂದ ಕೂಡಿದ ತಾಳ್ಮೆ ಇವರಿಗಿದ್ದರೆ, ಸೊಸೆಗೆ ವಯಸ್ಸು ಕಡಿಮೆ, ಉತ್ಸಾಹ ಹೆಚ್ಚು. ಅತ್ತೆಯೂ ಸೊಸೆಯ ಉತ್ಸಾಹಕ್ಕೆ ತಣ್ಣೀರು ಎರಚುವ ಮಾತುಗಳನ್ನು ಆಡದೇ, ಸೊಸೆಯ ವಯಸ್ಸು ಹಾಗೂ ಸಂದರ್ಭದಲ್ಲಿ ತನ್ನನ್ನು ಕಲ್ಪಿಸಿಕೊಂಡು ಮಾತನಾಡಿದರೆ ಸಮಸ್ಯೆ ಉಲ್ಬಣವಾಗುವುದಿಲ್ಲ.
* ಬಹುತೇಕ ಸಮಸ್ಯೆಗಳು ಸೃಷ್ಟಿಯಾಗುವುದು ಸಂವಹನದ ಕೊರತೆಯಿಂದ. ಇಬ್ಬರ ನಡುವೆ ಸರಿಯಾದ ಸಂವಹನ ಇಲ್ಲದೆ ಹೋದರೆ ಅಪಾರ್ಥಕ್ಕೆ ಎಡೆಯಾಗುತ್ತದೆ. ಅಡುಗೆ ತಿಂಡಿ, ಮನೆಕೆಲಸ ಇವುಗಳಲ್ಲಿ ವೆತ್ಯಾಸವಾದರೆ ಇಬ್ಬರಲ್ಲೂ ಕಲಹ ಶುರುವಾಗುವುದು ಸಾಮಾನ್ಯ. ಮನೆಕೆಲಸಗಳಲ್ಲಿ ಒಬ್ಬರೇ ತೀರ್ಮಾನಕ್ಕೆ ಬಂದು ನಿರ್ಧಾರ ತೆಗೆದುಕೊಳ್ಳದೆ ಪರಸ್ಪರ ಮಾತಾಡಿಕೊಂಡರೆ ತಪ್ಪು ತಿಳುವಳಿಕೆಗೆ ಅವಕಾಶ ಇರುವುದಿಲ್ಲ.