ನೀವು ತುಂಬಾ ಲಗೇಜ್ ಹೊಂದಿದ್ದರೆ ಅಥವಾ ನಿಮ್ಮ ಸ್ನೇಹಿತರ ಗುಂಪು ಸೋಂಬೇರಿಗಳಾಗಿದ್ದರೆ ಟ್ರೆಕ್ಕಿಂಗ್ ಮಾಡೋದು ನಿಜಕ್ಕೂ ಕಷ್ಟವೆ ಆಗಬಹುದು. ಆದರೆ ಇಲ್ಲೊಬ್ಬ ಮಹಿಳೆಯು ತನ್ನ ಸಾಕು ನಾಯಿಯನ್ನು ಟ್ರೆಕ್ಕಿಂಗ್ ಕರೆದುಕೊಂಡು ಬಂದು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾಳೆ.
ಸ್ಯಾಂಕ್ಟಿಂಗ್ ಪರ್ವತವನ್ನು ಏರಲು ನಿರ್ಧರಿಸಿದ ಚೀನಾದ ಮಹಿಳೆಯು 40 ಕಿಲೋಮೀಟರ್ ದೂರ ತನ್ನ ನಾಯಿಯನ್ನು ಸಾಗಿಸಲು ಇಬ್ಬರು ವ್ಯಕ್ತಿಯನ್ನು ನೇಮಿಸಿದ್ದಳು. ಪರ್ವತದ ತುತ್ತ ತುದಿಯನ್ನು ತಲುಪುವವವರೆಗೆ ಆಕೆ ಶ್ವಾನಕ್ಕಾಗಿ 11 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ.
ಮಹಿಳೆಯು ಚೀನಾದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾಳೆ. ಈ ಮೂಲಕ ಈ ಘಟನೆ ಬಗ್ಗೆ ನೆಟ್ಟಿಗರ ಜೊತೆ ಮಾಹಿತಿ ಶೇರ್ ಮಾಡಿದ್ದಾರೆ. ತನ್ನ ಪ್ರೀತಿಯ ಸಾಕು ಪ್ರಾಣಿಯನ್ನು ಮಗುವಿನಂತೆ ಪರ್ವತದ ತುತ್ತ ತುದಿಗೆ ತಲುಪಿಸುವವರೆಗೆ ತಾನು ಎಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ದೃಶ್ಯಾವಳಿಗಳಲ್ಲಿ ಇಬ್ಬರು ವ್ಯಕ್ತಿಗಳು ಆರಾಮ ಕುರ್ಚಿಯ ಮೇಲೆ ಶ್ವಾನವನ್ನು ಹೊತ್ತುಕೊಂಡು ಸಾಗುತ್ತಿರೋದನ್ನ ಕಾಣಬಹುದಾಗಿದೆ. ಈಕೆ ಎರಡು ನಾಯಿಯನ್ನು ಹೊಂದಿದ್ದಳು. ಇದರಲ್ಲಿ ಒಂದು ಶ್ವಾನ ನಡೆಯಲು ಇಚ್ಛಿಸುತ್ತಿರಲಿಲ್ಲ ಹಾಗೂ ಐಷಾರಾಮಿ ಸೇವೆಯನ್ನೇ ಬಯಸುತ್ತಿತ್ತು ಎನ್ನಲಾಗಿದೆ.
ಈ ಸೇವೆಗಳು ಮನುಷ್ಯರಿಗೆ ಮೀಸಲಾಗಿದ್ದರೂ ಸಹ ಮಹಿಳೆಯು ತನ್ನ ಶ್ವಾನಕ್ಕೆ ಈ ಸೇವೆಯನ್ನು ಬಳಕೆ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.