
ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್, ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿರುವ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವಾಗಿ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಆರ್.ಡಿ.ಪಾಟೀಲ್ ಬಂಧನವಾದ್ರೆ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೊರಬರುವ ಆತಂಕ ಎಟಿಎಂ ಸರ್ಕಾರಕ್ಕಿದೆ. ಹಾಗಾಗಿ ಪರೀಕ್ಷಾ ಅಕ್ರಮ ಕಿಂಗ್ ಪಿನ್ ಕಾಂಪೌಂಡ್ ಹಾರಿ ತಪ್ಪಿಸಿಕೊಳ್ಳಲು ಬಿಟ್ಟಿದ್ದಾರೆ ಎಂದು ಕಿಡಿಕಾರಿದೆ.
ಗೃಹ ಸಚಿವರೇ, ಯಾರಿಗಾಗಿ ಕಿಂಗ್ ಪಿನ್ ನನ್ನು ಬಂಧಿಸದೇ ಕಳ್ಳಾಟವಾಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳ್ಳ-ಪೊಲೀಸ್ ಆಟ ಆಡುತ್ತಾ ಕಳ್ಳರನ್ನು ರಾಜಾರೋಷವಾಗಿ ಓಡಾಡಿಕೊಂಡು ಇರುವಂತೆ ಬಿಟ್ಟು, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಕಲೆಕ್ಷನ್ ಮಾಡುತ್ತಿದೆ. ವರ್ಷಪೂರ್ತಿ ಓದಿ ನೌಕರಿ ಕನಸು ಕಾಣುವ ಬಡ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆಯುವ ಗ್ಯಾರಂಟಿ ಕೊಟ್ಟಿದೆ ಸಿದ್ದರಾಮಯ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.