ಕೊಪ್ಪಳ: ನದಾಫ್ ಹಾಗೂ ಪಿಂಜಾರ ಸಮುದಾಯ ಕುಲ ಶಾಸ್ತ್ರೀಯ ಅಧ್ಯಯನ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗೆ ಹೇಳಿದ್ದಾರೆ.
ಗಂಗಾವತಿಯಲ್ಲಿ ಶನಿವಾರ ರಾಜ್ಯ ನದಾಫ್, ಪಿಂಜಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 31ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನದಾಫ್ ಹಾಗೂ ಪಿಂಜಾರ ಸಮುದಾಯ ಅಭಿವೃದ್ಧಿಗೆ ಕುಲಶಾಸ್ತ್ರೀಯ ಅಧ್ಯಯನ ಅಗತ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಸಣ್ಣ ಸಮಾಜಗಳ ಸ್ಥಿತಿಗತಿ ತಿಳಿದು ಅವುಗಳ ಅಭಿವೃದ್ಧಿಗೆ ಕಾಂತರಾಜು ವರದಿ ಜಾರಿಗೆ ತೀರ್ಮಾನಿಸಿದ್ದಾರೆ. ಈ ವರದಿಯಿಂದ ಪಿಂಜಾರ ಸೇರಿದಂತೆ ಅನೇಕ ಸಮುದಾಯಗಳಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಮನ್ನಣೆ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.