ಪರಿಸರ ಸಂಪತ್ತು ಉಳಿಸಲು , ಅರಣ್ಯ ಬೆಳೆಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಇಲಾಖೆಗೆ ಹೊಸ ಶಕ್ತಿ ನೀಡುತ್ತಿದ್ದಾರೆ, ಮನುಕುಲದ ಉಳಿವಿಗಾಗಿ ನಿಸರ್ಗವನ್ನು ಉಳಿಸುವುದು ಬಹುಮುಖ್ಯ ಎಂಬ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 5 ಕೋಟಿ ಸಸಿ ನೆಡುವ ಮಹತ್ತರ ಯೋಜನೆ ರೂಪಿಸಿದ್ದಾರೆ. ಅನ್ಯ ಉದ್ದೇಶಕ್ಕಾಗಿ ಪರಿವರ್ತಿಸಲಾಗಿದ್ದ 5 ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿಯನ್ನು ಮರಳಿ ಅರಣ್ಯ ಭೂಮಿಯಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಈಗ ವನ್ಯ ಜೀವಿಗಳನ್ನು ಸಂರಕ್ಷಿಸುವ ಹಾಗೂ ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜದಲ್ಲಿ ಅದೆಷ್ಟೇ ದೊಡ್ಡವರಾಗಿರಲಿ, ಗಣ್ಯರಾಗಿರಲಿ, ವನ್ಯ ಜೀವಿಗಳ ಉತ್ಪನ್ನಗಳನ್ನು ಹೊಂದಿದವರ ವಿರುದ್ಧ ಕ್ರಮ ಜರುಗಿಸಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮೂಲಕ ವನ್ಯಜೀವಿಗಳನ್ನು ಸಂರಕ್ಷಿಸುವ ಸ್ಪಷ್ಟ ಸಂದೇಶ ನೀಡಲಾಗುತ್ತಿದೆ. ಕರ್ನಾಟಕದ ಪರಿಸರ ಸಂಪತ್ತನ್ನು ಉಳಿಸುವ ಹಾಗೂ ಬೆಳೆಸುವಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.