ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ರಾಜಕೀಯ ತಿರುವು ಪಡೆದುಕೊಂಡಿದ್ದು, ಪರ -ವಿರೋಧ ಚರ್ಚೆಗೆ ಕಾರಣವಾಗಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ರಾಮನಗರ ಜಿಲ್ಲೆ ಕನಕಪುರ ವಿಚಾರವಾಗಿ ಪರ, ವಿರೋಧ ಅಭಿಪ್ರಾಯ ಕೇಳಿಬಂದಿವೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್ ಅವರು, ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದರ ಹಿಂದೆ ರಿಯಲ್ ಎಸ್ಟೇಟ್ ಗೆ ಸಹಾಯ ಮಾಡುವ ಹುನ್ನಾರ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಕನಕಪುರ ಸೇರ್ಪಡೆ ಹಿಂದೆ ಡೆವಲಪರ್ ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಂಧೆ ಮಾಡಿ ಕೊಡುವ ಹುನ್ನಾರ ಇದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಮೊದಲು ನಾನೊಬ್ಬ ಬ್ಯುಸಿನೆಸ್ ಮ್ಯಾನ್, ರಾಜಕಾರಣ ನನ್ನ ಹವ್ಯಾಸ ಎಂದು ಡಿ.ಕೆ. ಶಿವಕುಮಾರ್ ಅನೇಕ ಸಲ ಹೇಳಿದ್ದಾರೆ. ಹಾಗಾಗಿ ಅವರ ಮಾತು, ಕೆಲಸ, ಪ್ರಯತ್ನದಲ್ಲಿ ಬ್ಯುಸಿನೆಸ್ ಗೆ ಮೊದಲ ಸ್ಥಾನ. ನಂತರದ ಸ್ಥಾನ ರಾಜಕೀಯಕ್ಕೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.