ನೀವು ಬಗೆಬಗೆಯ ಚಟ್ನಿಯನ್ನು ಮಾಡಿರುತ್ತಿರಿ, ತಿಂದಿರುತ್ತಿರಿ. ಕಾಯಿ ಚಟ್ನಿ, ಕಡಲೇಕಾಯಿ ಚಟ್ನಿ, ಈರುಳ್ಳಿ ಚಟ್ನಿ, ಟೊಮೋಟೊ ಚಟ್ನಿ ಹೀಗೆ ಅನೇಕ ಬಗೆಯ ತರಕಾರಿ, ಖಾದ್ಯಗಳನ್ನು ಬಳಸಿ ಚಟ್ನಿ ಮಾಡುವುದುಂಟು. ಆದರೆ ಇನ್ನೊಂದು ಬಗೆಯ ವಿಶೇಷ ಚಟ್ನಿಯ ಪರಿಚಯ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದೇ ಕೆಂಪಿರುವೆ ಚಟ್ನಿ.
ಹೌದು, ಕೆಂಪಿರುವೆಯ ಚಟ್ನಿ ಮಾಡುವುದುಂಟು. ಬಹುಶಃ ಇದು ಚೀನಾದಲ್ಲಿ ಎಂದು ನೀವು ಭಾವಿಸಿದರೆ, ನಿಮ್ಮ ಊಹೆ ತಪ್ಪು. ಇದು ನಮ್ಮ ಭಾರತದಲ್ಲೇ, ಅದರಲ್ಲೂ ಕರ್ನಾಟಕದ ಜನರೇ ಈ ಚಟ್ನಿ ಮಾಡುತ್ತಾರೆ. ಮಲೆನಾಡಿನ ಕಡೆಯ ಫೇಮಸ್ ಚಟ್ನಿ ಇದು. ಮರ, ಗಿಡಗಳ ಮೇಲೆ ಓಡಾಡುವ ಇರುವೆಗಳನ್ನು ಹಿಡಿದು ತಂದು, ಹುರಿದು ಮಾಡುವ ಈ ಚಟ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ, ಪೋಷಕಾಂಶಗಳ ಆಗರವಂತೆ, ರುಚಿಯಲ್ಲಂತೂ ಸಾಟಿಯೇ ಇಲ್ಲವಂತೆ.
ಸಾಮಾನ್ಯವಾಗಿ ಕೋಪ ಬಂದಾಗ, ನಿನ್ನನ್ನ ಹೊಸಕಿ ಹಾಕಿಬಿಡುತ್ತೇನೆ, ಚಟ್ನಿ ಮಾಡಿ ಬಿಡುತ್ತೇನೆ ಅಂತೆಲ್ಲಾ ಹೇಳುವ ಮಾತು ಇರುವೆಗಳ ಪಾಲಿಗೆ ನಿಜವಾಗುತ್ತದೆ. ನಮಗೆ ತಿಳಿಯದ ಹಾಗೆ ಮೈ ಮೇಲೆ ಹತ್ತಿ, ಕಚ್ಚಿ ಕಿರಿಕಿರಿ ಮಾಡುವ ಕೆಂಪಿರುವೆಗಳಿಗೆ ನಿನ್ನನ್ನು ಹುರಿದು ಚಟ್ನಿ ಮಾಡಿಬಿಡುತ್ತೇನೆ ಎಂದು ವಾರ್ನ್ ಮಾಡಬಹುದು ನೋಡಿ.