ಬೆಂಗಳೂರು: ಬಿಜೆಪಿಯೊಂದಿಗಿನ ಮೈತ್ರಿ ವಿರೋಧಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷದಿಂದ ವಜಾಗೊಳಿಸುವ ಸಾಧ್ಯತೆ ಇದೆ. ಇಂದು ಮಹತ್ವದ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದ್ದು, ನಂತರ ಶಾಸಕಾಂಗ ಸಭೆ ನಡೆಸಿ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷ ವಿರೋಧಿ ಹೇಳಿಕೆ ಆರೋಪದ ಮೇಲೆ ಪದಚ್ಯುತಿಗೊಳಿಸಲು ಜೆಡಿಎಸ್ ಗಂಭೀರ ಚಿಂತನೆ ನಡೆಸಿದೆ.
ಪಕ್ಷದ ಹಿರಿಯ ನಾಯಕರ ಕೋರ್ ಕಮಿಟಿ ಸಭೆ ಮತ್ತು ಶಾಸಕಾಂಗ ಪಕ್ಷದ ಸಭೆ ನಡೆಸಿ ಇಬ್ರಾಹಿಂ ಪದಚ್ಯುತಿ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಇಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಒರಿಜಿನಲ್ ಜೆಡಿಎಸ್, ಉಚ್ಚಾಟನೆ, ವಜಾ ಮಾಡಿದ ನಕಲಿ ಪತ್ರಗಳ ಕುರಿತಾಗಿ ಚರ್ಚೆ ನಡೆಸಲಾಗುವುದು. ಅಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ವಿಚಾರದ ಬಗ್ಗೆ ಪಕ್ಷದಲ್ಲಿ ನಡೆದ ಬೆಳವಣಿಗೆಗಳ ಕುರಿತಾಗಿ ಚರ್ಚೆ ನಡೆಯಲಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸುವುದು, ಇಲ್ಲವೇ ಪಕ್ಷದಿಂದ ಉಚ್ಚಾಟನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.