ಧರ್ಮಶಾಲಾ: ಏಕದಿನ ವಿಶ್ವಕಪ್ ಟೂರ್ನಿ ಹಲವು ಅಚ್ಚರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಫ್ಘಾನಿಸ್ತಾನ ಆಘಾತ ನೀಡಿದ ನಂತರ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಶಾಕ್ ನೀಡಿದೆ.
ಈ ಮೂಲಕ ಪ್ರಸ್ತುತ ಏಕದಿನ ವಿಶ್ವಕಪ್ ನಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ನೀಡಿದೆ. ಭಾನುವಾರ ಆಫ್ಘಾನಿಸ್ತಾನ ತಂಡ 69 ರನ್ ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿ ಗಮನ ಸೆಳೆದಿತ್ತು, ಇದರ ಬೆನ್ನಲ್ಲೇ ನೆದರ್ಲೆಂಡ್ಸ್ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದಿದೆ.
ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡ 43 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ಎಡ್ವರ್ಡ್ಸ್ 78, ವ್ಯಾನ್ ಡೇರ್ ಮೆರ್ವೆ 29, ಆರ್ಯನ್ ದತ್ತ ಅಜೇಯ 23 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ ಗಿಡಿ 2, ಜಾನ್ಸನ್ 2, ಕಗಿಸೊ ರಬಾಡ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 42.5 ಓವರ್ ಗಳಲ್ಲಿ ಒಂದು ಎಸೆತ ಬಾಕಿ ಇರುವಂತೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 207 ಗಳಿಸಿ ಸೋಲು ಕಂಡಿದೆ. ಡೇವಿಡ್ ಮಿಲ್ಲರ್ 43, ಹೆನ್ರಿಚ್ ಕ್ಲಾಸೆನ್ 28, ಕ್ವಿಂಟನ್ ಡಿಕಾಕ್ 20, ಗೆರಾಲ್ಡ್ 22, ಕೇಶವ ಮಹಾರಾಜ 40 ರನ್ ಗಳಿಸಿದರು, ನೆದರ್ಲೆಂಡ್ಸ್ ಪರ ವ್ಯಾನ್ ಲೀಕ್ 3, ಬಾಸ್ ಡೆ ಲೀಡ್ 2, ಮೆರ್ವೆ 2, ಮೀಕೆರೆನ್ 2 ವಿಕೆಟ್ ಪಡೆದರು.