ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲಕ್ಕೆ ರೈತರು ಇನ್ನಿಲ್ಲದ ಸಂಕಷ್ಟ ಎದುರಿಸುತಿದ್ದಾರೆ. ಈ ನಡುವೆ ಇಂದಿನಿಂದ ಕೇಂದ್ರ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮಳೆ ಕೊರತೆಯಿಂದ ನೊಂದ ರೈತನೊಬ್ಬ ಕೇಂದ್ರದ ಅಧಿಕಾರಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ.
ಅಪ್ಪಸಾಹೇಬ್ ಲಕ್ಕುಂಡಿ ಆತ್ಮಹತ್ಯೆಗೆ ಯತ್ನಿಸಿದ ರೈತ. ಕೇಂದ್ರ ಬರ ಅಧ್ಯಯನ ತಂಡ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಚಡಿ ಗ್ರಾಮದ ಬಳಿ ಅಧ್ಯಯನ ನಡೆಸುತ್ತಿತ್ತು. ಈ ವೇಳೆ ಕೈಯಲ್ಲಿ ವಿಷದ ಬಾಟಲಿ ಹಿಡಿದು ಬಂದ ರೈತ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾನೆ. ಬರ ಪರಿಸ್ಥಿತಿಯಿಂದಾಗಿ 40 ಎಕರೆ ಜಮೀನು ಸಂಪೂರ್ಣ ನಾಶವಾಗಿದೆ. ಹೊಲ ನೋಡಲು ಹಸಿರಾಗಿ ಕಾಣುತ್ತಿದೆ ಆದರೆ ಬೆಳೆ ಮಾತ್ರ ಬಂದಿಲ್ಲ. ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಕ್ಷಣ ಕೈಯಲ್ಲಿದ್ದ ವಿಷದ ಬಾಟಲಿ ತೆಗೆದು ವಿಷ ಸೇವಿಸಲು ಮುಂದಾಗಿದ್ದಾನೆ.
ಸ್ಥಳದಲ್ಲಿದ್ದ ಅಧಿಕಾರಿಗಳು, ಪೊಲೀಸರು ಕೂಡಲೇ ರೈತನನ್ನು ತಡೆದು ಸಮಾಧಾನ ಪಡಿಸಿದ್ದಾರೆ. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.