ಬೆಂಗಳೂರು : ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಅಪಫಾತದ ರಹಸ್ಯ ಭೇದಿಸಲು ಆರ್ ಟಿಒ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ನಟ ನಾಗಭೂಷಣ್ ಮದ್ಯ ಸೇವಿಸಿ ಕಾರು ಚಲಾಯಿಸಿಲ್ಲ ಎಂಬುದು ಧೃಡವಾಗಿದ್ದು, ಆದ್ದರಿಂದ ಅಪಘಾತ ಹೇಗೆ ಸಂಭವಿಸಿತು..? ಕಾರು ಚಲಾಯಿಸುವಾಗ ಮೊಬೈಲ್ ಬಳಕೆ ಏನಾದರೂ ಮಾಡಿದ್ದರಾ..? ಅಥವಾ ಇನ್ನಾವುದು ಕಾರಣ ಇದೆ ಎಂಬುದನ್ನು ಪತ್ತೆ ಹಚ್ಚಲು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆರ್ಟಿಓ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆರ್ಟಿಓ ಅಧಿಕಾರಿಗಳಿಗೆ ಐಎಂವಿ ಟೆಸ್ಟ್ ಮಾಡಲು ಸೂಚನೆ ನೀಡಿದ್ದು, ಈ ಮೂಲಕ ಸತ್ಯ ಹೊರ ಬರಲಿದೆ.
ಸೆ.30ರಂದು ರಾತ್ರಿ ಕನಕಪುರ ರಸ್ತೆಯಲ್ಲಿ ನಟ ನಾಗಭೂಷಣ್ ಕಾರು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದರು. ನಟ ನಾಗಭೂಷಣ್ ಅವರ ಕಾರು ಅಪಘಾತದಲ್ಲಿ ಪ್ರೇಮಾ ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಭೂಷಣ್ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ನಟನನ್ನು ಬಂಧಿಸಿದ್ದ ಪೊಲೀಸರು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು. ನಾಗಭೂಷಣ್ ವಿರುದ್ಧ ಐಪಿಸಿ ಸೆಕ್ಷನ್ 279ರ ಅಡಿ ಕೇಸ್ ದಾಖಲಾಗಿದ್ದು, ಕುಮಾರಸ್ವಾಮಿ ಲೇಔಟ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.