ಬೆಂಗಳೂರು: ಕಾವೇರಿ ನೀರಿಗಾಗಿ ಸೆ.26ರಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವ ಲಾಭಕ್ಕಾಗಿ ಬಂದ್ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ರಾಜ್ಯದ ಜನತೆಯ ಹಿತ ಕಾಯುತ್ತಿದ್ದೇವೆ. ಬೆಂಗಳೂರು ಬಂದ್ ಮಾಡುವುದು ಬೇಡ, ಯಾವ ಲಾಭಕ್ಕಾಗಿ ಮಾಡುತ್ತಿದ್ದಾರೆ? ಎಂದು ಕೇಳಿದರು.
ಬೆಂಗಳೂರು ಬಂದ್ ಮಾಡುವುದರಿಂದ ಯಾವುದೇ ಅನುಕೂಲವಾಗಲ್ಲ. ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬೆಂಗಳೂರು ಬಂದ್ ಮಾಡಿ ಬೆಂಗಳೂರು ಮರ್ಯಾದೆ ಹಾಳು ಮಾಡಿದರೆ ನೀವೆ ಚುಚ್ಚಿಕೊಂಡಂತೆ. ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯಗಳ ಜನರು ವಾಸವಾಗಿದ್ದಾರೆ. ಜನರಿಗೆ ಸಮಸ್ಯೆಯಾಗುವಂತೆ ಮಾಡಬಾರದು ಎಂದು ಹೇಳಿದರು.