ಚಂದ್ರಯಾನ-3’ ಸಕ್ಸಸ್ ಗೆ ಕಾರಣರಾದ ಭಾರತದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಮಹತ್ವಾಕಾಂಕ್ಷೆಯ ಚಂದ್ರಯಾನ -3 ಉಡಾವಣಾ ಪ್ಯಾಡ್ ನಿರ್ಮಾಣದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ ಎಂಬುದು ಬಹಳ ಬೇಸರದ ಸಂಗತಿಯಾಗಿದೆ.
ಇಸ್ರೋದ ಎಚ್ಇಸಿ (ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ನ ದೀಪಕ್ ಕುಮಾರ್ ಉಪ್ರಿಯಾ ತಮ್ಮ ಕುಟುಂಬವನ್ನು ಸಾಗಿಸಲು ರಾಂಚಿಯ ಧುರ್ವಾ ಪ್ರದೇಶದಲ್ಲಿ ಚಹಾ ಮತ್ತು ಇಡ್ಲಿ ಅಂಗಡಿಯನ್ನು ನಡೆಸುತ್ತಿದ್ದಾರೆ.
ವರದಿಯ ಪ್ರಕಾರ, ಚಂದ್ರಯಾನ -3 ಗಾಗಿ ಫೋಲ್ಡಿಂಗ್ ಪ್ಲಾಟ್ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ನಿರ್ಮಿಸಿದ ಸರ್ಕಾರಿ ಉದ್ಯೋಗಿ 18 ತಿಂಗಳುಗಳಿಂದ ಸಂಬಳ ನೀಡದ ಕಾರಣ ರಸ್ತೆ ಬದಿಯ ಅಂಗಡಿ ತೆರೆದಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ದೀಪಕ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಸಂಬಂಧಿಕರು ಮತ್ತು ಸ್ನೇಹಿತರಿಂದ ಸುಮಾರು 4 ಲಕ್ಷ ರೂ. ಸಾಲ ಪಡೆದಿದ್ದೇನೆ. ನಾನು ನನ್ನ ಹೆಂಡತಿಯ ಆಭರಣಗಳನ್ನು ಅಡವಿಟ್ಟು ಕೆಲವು ದಿನಗಳವರೆಗೆ ಮನೆಯನ್ನು ನಡೆಸುತ್ತಿದ್ದೆ. ಆದರೆ ಸಾಲ ತೀರಿಸಲು ಆಗುತ್ತಿಲ್ಲ. ಅದಕ್ಕಾಗಿ ರಸ್ತೆ ಬದಿ ಇಡ್ಲಿ ಅಂಗಡಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಹೊಟ್ಟೆ ತುಂಬಿಸಲು ಹಸಿವಿನಿಂದ ಸಾಯುವುದಕ್ಕಿಂತ ಇಡ್ಲಿ ಅಂಗಡಿ ಉತ್ತಮ ಎಂಬ ಉದ್ದೇಶದಿಂದ ನಾನು ಅಂಗಡಿಯನ್ನು ತೆರೆಯಬೇಕಾಯಿತು” ಎಂದು ಅವರು ಹೇಳಿದರು. ಹೆಂಡತಿ ಒಳ್ಳೆಯ ಇಡ್ಲಿಗಳನ್ನು ತಯಾರಿಸುತ್ತಾಳೆ. ಅವುಗಳನ್ನು ಮಾರಾಟ ಮಾಡುವ ಮೂಲಕ, ದಿನಕ್ಕೆ 300-400 ರೂಪಾಯಿಗಳನ್ನು ಗಳಿಸುತ್ತಾರೆ ಎಂದರು.
ಈ ವರ್ಷ ಶಾಲಾ ಶುಲ್ಕವನ್ನು ಇನ್ನೂ ಪಾವತಿಸದ ಕಾರಣ ಪ್ರತಿದಿನ ಶಾಲೆಯಿಂದ ನೋಟಿಸ್ ಕಳುಹಿಸುತ್ತಿದ್ದಾರೆ. ತನ್ನ ಹೆಣ್ಣುಮಕ್ಕಳು ಅಳುತ್ತಾ ಮನೆಗೆ ಬರುತ್ತಿರುವುದನ್ನು ನೋಡಿ ನನ್ನ ಹೃದಯ ಕಲುಕಿತು. ಅದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಉಪಾರಿಯಾ ಸೇರಿದಂತೆ ಕಂಪನಿಯ ಸುಮಾರು 2,800 ಉದ್ಯೋಗಿಗಳಿಗೆ ಸಂಬಳ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರಾದ ಉಪಾರಿಯಾ 2012 ರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ತೊರೆದು 8,000 ರೂ.ಗಳ ಸಂಬಳದೊಂದಿಗೆ ಎಚ್ಇಸಿಗೆ ಸೇರಿದ್ದರು ಎಂದು ತಿಳಿದು ಬಂದಿದೆ.