ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ 19 ನೇ ACMM ಕೋರ್ಟ್ ಗೆ ಅಭಿನವ ಹಾಲಶ್ರೀಯನ್ನು ಇಂದು ಹಾಜರುಪಡಿಸಲಾಗಿದ್ದು, ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಅದೇ ರೀತಿ ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ.
ಹಾಲಶ್ರೀಯನ್ನು ವಿಮಾನದ ಮೂಲಕ ಒಡಿಶಾದ ಕಟಕ್ ನಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ಸಿಸಿಬಿ ಪೊಲೀಸರು ಕರೆ ತಂದಿದ್ದಾರೆ. ನಂತರ ಹಲವು ಕಡೆ ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಇಂದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಸ್ವಾಮೀಜಿ ಬಂಧನದಿಂದ ಪ್ರಕರಣದ ಬಗ್ಗೆ ಇನ್ನಷ್ಟು ಸ್ಪೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಇನ್ನೋರ್ವನಿಗೆ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಲು ರಂಗತಾಲೀಮು ನಡೆಸಿ ಉದ್ಯಮಿಯನ್ನು ವಂಚಿಸಿದ್ದರು. ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಎ3 ಆರೋಪಿಯಾಗಿದ್ದಾರೆ.