ಶಿವಮೊಗ್ಗ : ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆ ಇದ್ದು ಸದರಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಗುಣಮಟ್ಟ ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡ ಅವರಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಮಾರ್ಟ್‍ಸಿಟಿ ಯೋಜನೆ, ಮೆಗ್ಗಾನ್ ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿದ್ಯುತ್ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವ ಹಾಗೂ ಅಪೂರ್ಣವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಸೂಚಿಸಿದ ಅವರು ಮಹಾನಗರಪಾಲಿಕೆ ಆವರಣದಲ್ಲಿ ಅನುಮತಿ ಇಲ್ಲದೆ ಕೈಕೊಳ್ಳಲಾಗಿರುವ ಕಾಮಗಾರಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಬ್ಲಾಕ್ಗಳನ್ನು ಅಳವಡಿಸಿರುವ ಕಾಮಗಾರಿಗಳು, ಇನ್ನೂ ಕೆಲವು ಸ್ಥಳಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ವಿನಿಯೋಗ ಮಾಡಿರುವುದು ಕಂಡು ಬಂದಿದೆ ಅವೈಜ್ಞಾನಿಕವಾಗಿ ಮಾಡಲಾಗಿರುವ ಪುಟ್ಬಾತ್ ಕಾಮಗಾರಿಯಿಂದಾಗಿ ಮಳೆನೀರು ನಿಂತು ಜನಸಾಮಾನ್ಯರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೀವ್ರ ತರಹದ ಅಡಚಣೆ ಉಂಟಾಗುತ್ತಿದೆ. ಸ್ಟೇಡಿಯಂ ಸುತ್ತಲೂ ನಿರ್ಮಾಣಗೊಂಡಿರುವ ವಾಕಿಂಗ್‍ಪಾತ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳಿವೆ ಎಂದವರು ನುಡಿದರು.
ಇಂತಹ ಅನೇಕ ಯೋಜನೆಗಳ ಅನುಷ್ಟಾನದಿಂದಾಗಿ ಯೋಜನೆಯ ಆರಂಭದಿಂದ ಮುಕ್ತಾಯ ಹಂತದವರೆಗೂ ಜನ ಕಿರಿಕಿರಿ ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಸದರಿ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳ ಕುರಿತು ವಿವರವಾದ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸಚಿವರು ಮಹಾನಗರ ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡ ಅವರಿಗೆ ಸೂಚಿಸಿದರು.