ಮಗುವಿನ ಕಸ್ಟಡಿ ಪ್ರಕರಣವೊಂದರ ಸಂಬಂಧ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದ್ದು, ಚಿಕ್ಕ ಮಗುವಿಗೆ ಯಾರ ಪೋಷಣೆ ಎಂಬುದನ್ನು ಕೇವಲ ತಾಯಿ ನೀಡುವ ಪ್ರೀತಿ ಹಾಗೂ ಕಾಳಜಿಯನ್ನು ಆಧರಿಸಿ ನಿರ್ಧರಿಸಲು ಆಗುವುದಿಲ್ಲ ಎಂದು ಹೇಳಿದೆ.
2020ರಲ್ಲಿ ಮಗುವಿನ ತಂದೆ ಈ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು. ಅಮೆರಿಕದಲ್ಲಿ ಜನಿಸಿರುವ ತಮ್ಮ ಮೂರು ವರ್ಷದ ಮಗುವಿನ ಕಸ್ಟಡಿ ತಮಗೆ ಕೊಡಬೇಕೆಂದು ಕೋರಿದ್ದರು. ಮಗುವನ್ನು ತನ್ನೊಂದಿಗೆ ಅಮೆರಿಕಕ್ಕೆ ಕೊಂಡೊಯ್ಯಲು ಇಚ್ಛಿಸುತ್ತಿರುವುದಾಗಿ ಕೋರ್ಟ್ ಮುಂದೆ ಮಗುವಿನ ತಂದೆ ಹೇಳಿದ್ದರು.
ಮಗುವಿನ ಯೋಗಕ್ಷೇಮವನ್ನು ಆಧರಿಸಿ ಮಗುವಿನ ಕಸ್ಟಡಿಯನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತೆ ಎಂದು ಹೇಳಿದ ನ್ಯಾಯಾಲಯವು 15 ದಿನಗಳಲ್ಲಿ ಮಗುವನ್ನು ಅದರ ತಂದೆಗೆ ಹಸ್ತಾಂತರಿಸುವಂತೆ ಮಗುವಿನ ತಾಯಿಗೆ ಸೂಚನೆ ನೀಡಿದೆ.
ಮಗುವಿನ ಹಿತಾಸಕ್ತಿಗಳನ್ನು ನಿರ್ಧರಿಸುವಾಗ ಕೇವಲ ಪ್ರೀತಿ ಹಾಗೂ ಕಾಳಜಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಮಗುವಿನ ಮೂಲಭೂತ ಹಕ್ಕು. ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆ ಎಲ್ಲಿ ಚೆನ್ನಾಗಿ ಆಗುತ್ತದೆ ಎಂಬುದನ್ನು ನಿರ್ಧರಿಸಿ ಮಗುವಿನ ಕಸ್ಟಡಿ ಯಾರಿಗೆ ನೀಡಬೇಕೆಂದು ನಿರ್ಣಯಿಸಬಹುದು ಎಂದು ಕೋರ್ಟ್ ಹೇಳಿದೆ.
2010ರಲ್ಲಿ ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಹಾಗೂ ಅದೇ ವರ್ಷ ಜೂನ್ ತಿಂಗಳಲ್ಲಿ ಈ ದಂಪತಿ ಅಮೆರಿಕಕ್ಕೆ ತೆರಳಿದ್ದರು. ಅಕ್ಟೋಬರ್ನಲ್ಲಿ ಅಮೆರಿಕದ ಶಾಶ್ವತ ನಿವಾಸಿಗಳು ಕೂಡ ಆದರು. ಈ ದಂಪತಿಗೆ 2019ರಲ್ಲಿ ಮಗು ಜನಿಸಿತ್ತು. ಡಿಸೆಂಬರ್ 2020ರಲ್ಲಿ ಮಗುವಿನ ಸಮೇತ ತಾಯಿ ಭಾರತಕ್ಕೆ ಮರಳಿದ್ದರು. ಹಾಗೂ ತಂದೆಯೊಂದಿಗಿನ ಮಗುವಿನ ಸಂಪರ್ಕವನ್ನು ಕತ್ತರಿಸಿದ್ದರು. ಇದಾದ ಬಳಿಕ ಮಗು ಕಿಡ್ನಾಪ್ ಆಗಿದೆ ಎಂದು ತಂದೆ ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿಗೆ ವರದಿ ಮಾಡಿದ್ದರು.