ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ಸರ್ಕಾರಿ ನೌಕರರ ಕರ್ತವ್ಯವಾಗಿರುತ್ತದೆ. ಆದರೆ ಕೆಲ ನೌಕರರು ತೋರುವ ವರ್ತನೆಗಳಿಂದಾಗಿ ಜನಸಾಮಾನ್ಯರು ಬೇಸತ್ತಿದ್ದು, ಆದರೆ ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಜನರ ಸಂಕಷ್ಟ ಆಲಿಸಲು ವಿಶಿಷ್ಟ ರೀತಿಯಲ್ಲಿ ಪ್ರಯತ್ನ ಕೈಗೊಂಡಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಇಂತಹದೊಂದು ವಿಶಿಷ್ಟ ಕಾರ್ಯದಲ್ಲಿ ತೊಡಗಿದ್ದು, ಪ್ರತಿನಿತ್ಯ ಬೆಳಿಗ್ಗೆ ಸೈಕಲ್ ಏರುವ ಅವರು ಮಾರ್ಗ ಮಧ್ಯದಲ್ಲಿ ಸಿಗುವ ಹಳ್ಳಿಗರ ಸಮಸ್ಯೆಗಳನ್ನು ಆಲಿಸುತ್ತಾರೆ. ಅಷ್ಟೇ ಅಲ್ಲ, ಸ್ಥಳೀಯ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಾರೆ.
ಪ್ರತಿನಿತ್ಯ ಮುಂಜಾನೆ 6:30 ರಿಂದ ತಮ್ಮ ಈ ಸೈಕಲ್ ಯಾತ್ರೆ ಆರಂಭಿಸುವ ಉಪ ವಿಭಾಗಾಧಿಕಾರಿಗಳು, ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರೈತರ ಸಂಕಷ್ಟಗಳಿಗೂ ಸ್ಪಂದಿಸುತ್ತಿದ್ದಾರೆ. ಇದರ ಜೊತೆಗೆ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವವನ್ನೂ ತಿಳಿಸಿಕೊಡುವ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಕಚೇರಿಗೆ ತೆರಳಿದ ಬಳಿಕ ಸೈಕಲ್ ಸವಾರಿ ವೇಳೆ ತಾವು ಆಲಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಲು ಆದ್ಯತೆ ನೀಡುತ್ತಾರೆ.