ಬೆಂಗಳೂರು : ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರ ದುಪ್ಪಟ್ಟಾಗಿದೆ.
ಹೌದು, ಶಕ್ತಿ ಯೋಜನೆ ಜಾರಿಗೆ ಬಂದ ಹಿನ್ನೆಲೆ ಖಾಸಗಿ ಬಸ್ ಗಳು ನಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆ ಹಬ್ಬದ ವೇಳೆಯಲ್ಲಿ ಧಿಡೀರ್ ಆಗಿ ಟಿಕೆಟ್ ಬೆಲೆ ಏರಿಸಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.
ಗೌರಿ ಗಣೇಶ ಹಬ್ಬವಿರುವುದರಿಂದ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿದ್ದು, ಟಿಕೆಟ್ ಬುಕ್ ಮಾಡೋಕೆ ಮುಗಿಬಿದ್ದಿದ್ದಾರೆ. ಮಾನ್ಯ ದಿನಗಳಲ್ಲಿ 500-700 ರೂ ಇದ್ದ ಟಿಕೆಟ್, ಇದೀಗ ಹಬ್ಬ ಇರುವ ಕಾರಣಕ್ಕೆ 1500 – 2500 ರೂ ಹೆಚ್ಚಳವಾಗಿದ್ದು, ಆನ್ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ.
ಸದ್ಯ. ಬೆಂಗಳೂರು-ಉಡುಪಿ-880-1050 ರೂ ಟಿಕೆಟ್ ದರವಿದ್ದು, ಬೆಂಗಳೂರು-ಬಳ್ಳಾರಿ-999 ರಿಂದ 1449 ರೂ ಇದೆ. ಬೆಂಗಳೂರು-ಬೆಳಗಾವಿ-1200 ರಿಂದ 2000 ರೂ. ಇದೆ. ಬೆಂಗಳೂರು-ರಾಯಚೂರು-850 ರಿಂದ 1110 ರೂ ಗೆ ಏರಿಕೆ ಮಾಡಲಾಗಿದೆ.
ಈಗಾಗಲೇ ಸರ್ಕಾರ ದರ ಹೆಚ್ಚಳ ಮಾಡದಂತೆ ಖಾಸಗಿ ಬಸ್ ಹಾಗೂ ವಾಹನಗಳಿಗೆ ಖಡಕ್ ಸೂಚನೆ ನೀಡಿದೆ. . ಆದರೆ ಶಕ್ತಿ ಯೋಜನೆ ಜಾರಿಬಂದಾಗಿನಿಂದ ನಾವು ನಷ್ಟದಲ್ಲಿದ್ದೇವೆ, ದರ ಹೆಚ್ಚಳ ಮಾಡದೇ ಹೋದರೆ ಬಸ್ ಗಳನ್ನು ಓಡಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.