ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಅವರಿಗೆ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಚೈತ್ರಾ ಕುಂದಾಪುರ, ಈ ಪ್ರಕರಣದಲ್ಲಿ ಆರೋಪಿಯಾಗಿ ಈಗ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನಕ್ಕೊಳಗಾದರೆ ದೊಡ್ಡ ದೊಡ್ಡವರ ಹೆಸರು ಬಹಿರಂಗವಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದು, ಇದರ ಜೊತೆಗೆ ಈಗ ಕೆಲ ಫೋಟೋಗಳು ವೈರಲ್ ಆಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿರುವ ಫೋಟೋಗಳಲ್ಲಿ ಚೈತ್ರಾ ಕುಂದಾಪುರ ಹಾಗೂ ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಇದ್ದು ಇವರುಗಳು, ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲೂಕಿನ ಹಿರೇ ಹಡಗಲಿಯ ಹಾಲಮಠಕ್ಕೆ ಭೇಟಿ ನೀಡಿದ್ದ ವೇಳೆ ತೆಗೆದ ಫೋಟೋಗಳು ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಬೇಕೆಂದರೆ ಅಭಿನವ ಹಾಲಶ್ರೀ ಸ್ವಾಮೀಜಿಗೂ ಹಣ ನೀಡಬೇಕೆಂದು ಚೈತ್ರಾ ಕುಂದಾಪುರ, ಉದ್ಯಮಿ ಗೋವಿಂದ ಬಾಬು ಅವರಿಗೆ ಹೇಳಿದ್ದಳೆನ್ನಲಾಗಿದ್ದು, ಹೀಗಾಗಿ ಇಬ್ಬರೂ ಸಹ ಆ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈಗ ವೈರಲ್ ಆಗಿರೋ ಫೋಟೋದಲ್ಲಿ ಹಾಲಶ್ರೀ ಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ. ಪ್ರಸಕ್ತ ವಿದ್ಯಾಮಾನಗಳನ್ನು ಗಮನಿಸಿದರೆ ವಿಧಾನಸಭಾ ಟಿಕೆಟ್ ಡೀಲ್ ಮಠದಲ್ಲಿಯೇ ನಡೆದಿತ್ತಾ ಎಂಬ ಅನುಮಾನ ಮೂಡಿದೆ.