ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
2023 ಮಾರ್ಚ್ 23ರಂದು ರಾಜ್ಯಪಾಲರು, ಮೈಸೂರು ವಿವಿ ಕುಲಪತಿ ಹುದ್ದೆಗೆ ಲೋಕನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಲೋಕನಾಥ್ ನೇಮಕ ಆದೇಶ ರದ್ದು ಕೋರಿ ಪ್ರೊ. ಶರತ್ ಅನಂತಮೂರ್ತಿ ಹಾಗೂ ಡಾ.ಜಿ.ವೆಂಕಟೇಶ್ ಕುಮಾರ್ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ, ಮೈಸೂರು ವಿವಿ ಕುಲಪತಿ ಲೋಕನಾಥ್ ನೇಮಕ ಆದೇಶ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಅಲ್ಲದೇ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ರ ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ-2001ರ ನಿಯಮಗಳ ಅನುಸಾರ ಮೈಸೂರು ವಿವಿ ಕುಲಪತಿ ಹುದ್ದೆಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಇದೇ ವೇಳೆ ನಿರ್ದೇಶನ ನೀಡಿದೆ.