ಬೆಂಗಳೂರು : 2023-24ನೇ ಸಾಲಿಗೆ ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಣೆಗಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ (ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ.
ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿ ಮಕ್ಕಳಿಗೆ ಅಪೌಷ್ಠಿಕತೆ ಮತ್ತು ರಕ್ತಹೀನತೆ ನಿವಾರಣೆಗೆ ಮೊಟ್ಟೆ, ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ಪೂರಕ ಪೌಷ್ಠಿಕಾಂಶವುಳ್ಳ ಆಹಾರವನ್ನು ವಾರ್ಷಿಕವಾಗಿ ಒಟ್ಟು 80 ದಿನಗಳ ಅವಧಿಗೆ ಅನುಷ್ಠಾನಗೊಳಿಸಲು ಉಲ್ಲೇಖ(1)ರ ಆದೇಶದಲ್ಲಿ ಅನುಮತಿ ನೀಡಿರುತ್ತದೆ. ಈ ಹಿನ್ನಲೆಯಲ್ಲಿ ಸದರಿ ಕಾರ್ಯಕ್ರಮವನ್ನು 2023-24ನೇ ಸಾಲಿಗೆ ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿ ಮಕ್ಕಳಿಗೆ ಒಟ್ಟು 80 ದಿನಗಳ ಅವಧಿಗೆ ಒದಗಿಸಲು ತೀರ್ಮಾನಿಸಿರುತ್ತದೆ. ಸದರಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಉಲ್ಲೇಖ(2)ರನ್ವಯ ಮಾರ್ಗಸೂಚಿ ಹೊರಡಿಸಿರುತ್ತಾರೆ.
ಕಾರ್ಯಕ್ರಮ ಅನುಷ್ಠಾನದ ಮಾರ್ಗಸೂಚಿ ವಿವರ
- ಜೂನ್-2023 ರಿಂದ ಮೊಟ್ಟೆ/ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮ ಆರಂಭಗೊಳ್ಳುವ ಮೊದಲ ವಾರದಲ್ಲಿ ಮೊದಲ ಹಂತದ ಚಟುವಟಿಕೆಗಾಗಿ, ಶಾಲೆಯ ತರಗತಿವಾರು ಎಲ್ಲಾ ವಿದ್ಯಾರ್ಥಿಗಳ ದೇಹದ ತೂಕ ಮತ್ತು ಎತ್ತರವನ್ನು ಅಳತೆಮಾಡಿ ದಾಖಲೆಯನ್ನು ಒಂದು ವಹಿಯಲ್ಲಿ ನಿರ್ವಹಿಸುವುದು. ಪ್ರತಿ ತಿಂಗಳ ಕೊನೆಯ ದಿನಾಂಕದಂದು ಒಂದು ಬಾರಿ ಮೆಷರೆಂಟ್ ಮಾಡಿ ರೀಡಿಂಗ್ ತೆಗೆದುಕೊಳ್ಳುವುದು. ಆರಂಭದ ದಿನ ಮತ್ತು ಕೊನೆಯ ದಿನದ ಮೆಷರೆಂಟ್ ರೀಡಿಂಗ್‌ನ್ನು ಹೋಲಿಕೆ ಮಾಡಿ ನೋಡಿ ಪ್ರಗತಿ ವಿಶ್ಲೇಷಣೆ ಮಾಡಿ ಪ್ರತಿ ವಿದ್ಯಾರ್ಥಿಯಲ್ಲಿ ಆಗಿರಬಹುದಾದ ಭೌತಿಕ ಬೆಳವಣಿಗೆಯಲ್ಲಾದ ಬದಲಾವಣೆ ಕುರಿತಂತೆ ಅಭಿಪ್ರಾಯ ದಾಖಲಿಸುವುದು. ಈ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲೆಯ ದೈಹಿಕ ಶಿಕ್ಷಕರಿಗೆ, ದೈಹಿಕ ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ಆಯಾ ತರಗತಿ ಶಿಕ್ಷಕರಿಗೆ ನೀಡಲಾಗಿದ್ದು, ದಾಖಲೆ ನಿರ್ವಹಿಸುವಂತೆ ಸೂಚಿಸಿದೆ.
- ಪ್ರತಿ ವಾರಕ್ಕೆ ವಿತರಣೆಗೆ ಅಗತ್ಯವಿರುವ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಮುಂಗಡವಾಗಿ ಪ್ರಾಮಾಣೀಕೃತವಾದ ಸ್ಥಳೀಯ ಮಾರುಕಟ್ಟೆಯ ಅಂಗಡಿ, ವ್ಯಾಪಾರಿ ಸಂಸ್ಥೆ, ಸಮೀಪದ ವ್ಯಾಪಾರಿ ಕೇಂದ್ರ, ಮೊಟ್ಟೆ/ಬಾಳೆಹಣ್ಣು ಮಾರಾಟ ಮಾಡುವ ರೈತರು, ಶೇಂಗಾ ಚಿಕ್ಕಿ ತಯಾರಿಸುವ ಗೃಹ ಉದ್ಯೋಗ್, ಸ್ತ್ರೀ ಶಕ್ತಿ ಕೇಂದ್ರ, ಮುಂತಾದ ಆಹಾರ ತಯಾರಿಕ ಘಟಕಗಳಿಂದ, ಮುಕ್ತ ಮಾರುಕಟ್ಟೆಯಲ್ಲಿ ಅರ್ಹ ವರ್ತಕರಿಂದ ಗುಣಮಟ್ಟ ಖಾತ್ರಿಪಡಿಸಿಕೊಂಡು ಖರೀದಿಸುವುದು. ಈ ಸಂಬಂಧ ಅಧಿಕೃತ ಬಿಲ್ಲು ಪಡೆದು ವೋಚರ್ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟು ನಿರ್ವಹಿಸುವುದು.
- ವಿತರಣೆ ಪೂರ್ವದಲ್ಲಿ ಮೊಟ್ಟೆಯನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು ಮತ್ತು ಮೊಟ್ಟೆಯನ್ನು ತಿನ್ನದೇ ಬಾಳೆಹಣ್ಣನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು, ಬಾಳೆಹಣ್ಣು ತಿನ್ನದೇ ಇರುವವರಿಗೆ ಶೇಂಗಾ ಚಿಕ್ಕಿ ತಿನ್ನುವ ಫಲಾನುಭವಿಗಳು ಎಂಬುದಾಗಿ ಆಯಾ ವಿದ್ಯಾರ್ಥಿಗಳ ಮತ್ತು ಪೋಷಕರ ಒಪ್ಪಿಗೆ ಪಡೆದು ತರಗತಿವಾರು ಆಯಾ ತರಗತಿ ಶಿಕ್ಷಕರು ಕಡ್ಡಾಯವಾಗಿ ಗುರುತಿಸಿ, ಪ್ರತ್ಯೇಕವಾದ ಫಲಾನುಭವಿಗಳ ಪಟ್ಟಿ ದಾಖಲೆಯನ್ನು ಸಿದ್ಧಪಡಿಸಿಕೊಂಡು ಇದರಂತೆ, ವಿತರಣೆಯ ಅಗತ್ಯ ಕ್ರಮವನ್ನು ನಿರ್ವಹಿಸುವುದು. ಸ್ವೀಕೃತಿ ದಾಖಲೆ ನಿರ್ವಹಿಸುವುದು.
- ಈ ಸಂಬಂಧ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಅಥವಾ ಶೇಂಗಾ ಚಿಕ್ಕಿಯನ್ನು ಖರೀದಿಸಿದ ಲೆಕ್ಕಪತ್ರ ವಿವರಗಳನ್ನು, ಬಿಲ್ಲು-ವೋಚರ್ ದಾಖಲೆಗಳ ವಿವರಗಳನ್ನು ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಸಿದ್ಧಪಡಿಸಿ ದಾಖಲೆ ನಿರ್ವಹಿಸಿ ಮೇಲಧಿಕಾರಿಗಳ ತಪಾಸಣೆಯ ಸಂದಂರ್ಭದಲ್ಲಿ ಹಾಜರುಪಡಿಸತಕ್ಕದ್ದು, ಹಾಗೂ ಪ್ರತಿ ಮಾಹೆಯಲ್ಲಿ ಶಾಲಾ ಹಂತದ ಖರೀದಿ ಸಮಿತಿ ಸಭೆ ಸೇರಿದಾಗ ಪರಿಶೀಲನೆಗೆ ಹಾಜರುಪಡಿಸಿ, ದೈನಂದಿನ ಹಾಜರಾತಿಯಂತ ತರಗತಿವಾರು ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ, ಖರೀದಿ, ವಿತರಣೆಯ ವಿಚ್ಚದ ವಿವರ ಸಲ್ಲಿಸಿ ನಡಾವಳಿಯೊಂದಿಗೆ ದೃಢೀಕರಣ ಸಹಿ ಪಡೆದು ಶಾಲಾ ಹಂತದಲ್ಲಿ ಇಟ್ಟು ನಿರ್ವಹಿಸುವುದು ಹಾಗೂ ಇದರ ಪ್ರತಿಯನ್ನು ಸಂಬಂಧಿಸಿದ ತಾಲೂಕು ಪಂಚಾಯತ್ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಕಛೇರಿಗೆ ಪ್ರತಿ ಮಾಹೆ ಮಕ್ಕಳ ಹಾಜರಾತಿಯ ದೃಢೀಕರಣ ದಾಖಲೆ ಹಾಗೂ ಮಾಸಿಕ ಉಪಯೋಗಿತಾ ಪ್ರಮಾಣ ಪತ್ರದೊಂದಿಗೆ ನಿಗಧಿತ ನಮೂನೆಯಲ್ಲಿ ಮುಖ್ಯ ಶಿಕ್ಷಕರು ತಪ್ಪದೇ ಸಲ್ಲಿಸುವಂತೆ ಸೂಚಿಸಿದೆ.
- ವಿತರಣೆಯ ನಿಗದಿತ ದಿನದಂದು ಹಾಜರಾಗಿರುವ ಪ್ರತಿ ವಿದ್ಯಾರ್ಥಿ ಫಲಾನುಭವಿಗೆ ವಿತರಿಸಿದ ಮೊಟ್ಟೆ/ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಪೌಷ್ಠಿಕ ಆಹಾರದ ಸ್ವೀಕೃತೀಗಾಗಿ ಪ್ರತ್ಯೇಕ ಸ್ವೀಕೃತಿ ವಹಿ ದಾಖಲೆಯನ್ನು ಆಯಾ ತರಗತಿಯಲ್ಲಿಟ್ಟು ಸಹಿ ಪಡೆದು ದಾಖಲೆ ನಿರ್ವಹಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ತರಗತಿ ಶಿಕ್ಷಕರಿಗೆ ನೀಡಲಾಗಿದೆ. ಸದರಿ ತರಗತಿವಾರು ಫಲಾನುಭವಿ ಸ್ವೀಕೃತಿ ಸಹಿ-ವಹಿ ದಾಖಲೆಯನ್ನು ದೃಢೀಕರಣದೊಂದಿಗೆ ಮೇಲಾಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ, ಖರೀದಿ ಸಮಿತಿಯ ಪರಿಶೀಲನೆಗೆ ಹಾಗೂ ತಾಲ್ಲೂಕು ಪಂಚಾಯತಿಗೆ ಸಲ್ಲಿಸುವ ಬಿಲ್ಲು ಲೆಕ್ಕ ವಿವರಗಳೊಂದಿಗೆ ಮುಖ್ಯಶಿಕ್ಷಕರು ಹಾಜರುಪಡಿಸಕ್ಕದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಆರೋಪಗಳು ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸುವುದು ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿ ರವರಿಗೆ ಇರುತ್ತದೆ.