ನವದೆಹಲಿ: ಉಚಿತ ಯೋಜನೆಗಳನ್ನು ನೀಡುವುದರಿಂದ ದೇಶದ ಆರ್ಥಿಕತೆಗೆ ಹಾನಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಮತ್ತೆ ಕಿಡಿ ಕಾರಿದ ಪ್ರಧಾನಿ, ಉಚಿತ ಯೋಜನೆಗಳು ತಾತ್ಕಾಲಿಕ ರಾಜಕೀಯ ಲಾಭ ತಂದು ಕೊಡಬಹುದು. ಆದರೆ, ಇವುಗಳಿಗೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ರಾಜ್ಯ ಸರ್ಕಾರಗಳು ಆರ್ಥಿಕ ಬಗ್ಗೆ ಪ್ರಜ್ಞೆ ಹೊಂದಿರಬೇಕು ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಸರ್ಕಾರಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಜನಪ್ರಿಯ ಯೋಜನೆಗಳನ್ನು ನೀಡುವ ಮೊದಲು ಎಚ್ಚರಿಕೆ ವಹಿಸಬೇಕು. ಆರ್ಥಿಕ ಬಿಕ್ಕಟ್ಟು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಅಭಿವೃದ್ಧಿಶೀಲ ದೇಶಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಈಗಾಗಲೇ ಸಾಲದ ಬಿಕ್ಕಟ್ಟಿಗೆ ಸಿಲುಕಿ ಹೊರಬಂದಿರುವ, ಪ್ರಸ್ತುತ ಸಾಲ ಬಿಕ್ಕಟ್ಟಿಗೆ ಸಿಲುಕಿರುವ ದೇಶಗಳು ಆರ್ಥಿಕ ಶಕ್ತಿಗೆ ಇನ್ನಿಲ್ಲದ ಒತ್ತು ನೀಡುತ್ತಿವೆ ಎಂದು ಹೇಳಿದ್ದಾರೆ.