ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ 21 ವರ್ಷದ ಬುಡಕಟ್ಟು ಮಹಿಳೆಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದ್ದು, ಸರ್ಕಾರದಿಂದ ಸಂತ್ರಸ್ತೆಗೆ ನೆರವು ಘೋಷಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಾಪ್ ಗಢದ ಧರಿಯಾವಾಡದಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬವನ್ನು ಭೇಟಿ ಮಾಡಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಲಾಗಿದೆ. ಮಹಿಳೆಗೆ ಸರ್ಕಾರಿ ನೌಕರಿ ನೀಡಲಾಗಿದೆ. ಆಧಾರವಾಗಿ ಆಕೆಗೆ 10 ಲಕ್ಷ ರೂ. ಎಫ್.ಡಿ. ಇಡಲಾಗುವುದು ಎಂದು ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ, ಎಸ್‌ಐಟಿ ರಚಿಸಲಾಗಿದೆ, 11 ಜನರನ್ನು ಬಂಧಿಸಲಾಗಿದೆ, ನಾನು ಸಂತ್ರಸ್ತೆಯ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಸರ್ಕಾರವು ನಿಮ್ಮೊಂದಿಗೆ ನಿಂತಿದೆ. ನ್ಯಾಯ ಸಿಗುತ್ತದೆ ಎಂದು ಅವರಿಗೆ ಭರವಸೆ ನೀಡಿದ್ದೇನೆ. ನಾನು ಆಕೆಗೆ ಸರ್ಕಾರಿ ಉದ್ಯೋಗವನ್ನು ನೀಡಿದ್ದೇನೆ. ಮೂವರು ಸಹೋದರಿಯರು ಮತ್ತು ಒಬ್ಬ ಚಿಕ್ಕ ಸಹೋದರನನ್ನು ಒಳಗೊಂಡಿರುವ ಆಕೆಯ ಕುಟುಂಬವನ್ನು ಪೋಷಿಸಬಹುದು. ಆಕೆಯ ತಂದೆ ಕೂಲಿ ಕೆಲಸ ಮಾಡುತ್ತಾರೆ. ಮಹಿಳೆಗೆ 10 ಲಕ್ಷ ರೂ. ಸ್ಥಿರ ಠೇವಣಿ ಮಾಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.