ಬೆಂಗಳೂರು : ಮಳೆಕೊರತೆಯಿಂದಾಗಿ ಬೆಳೆ ನಷ್ಟದ ಜೊತೆಗೆ ಇದೀಗ ರಾಜ್ಯದ ಜನತೆಗೆ ಕರೆಂಟ್ ಶಾಕ್ ಕಾದಿದ್ದು, ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುವ ಸಾಧ್ಯತೆ ಇದೆ.
ಮಳೆ ಕೊರತೆಯಿಂದಾಗಿ ತೀವ್ರ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ನಿತ್ಯ ಸಾವಿರಾರು ಮೆಗಾ ವ್ಯಾಟ್ ವಿದ್ಯುತ್ ಖರಿದಿಸಿ ಪರಿಸ್ಥಿತಿ ನಿಭಾಯಿಸುತ್ತಿರುವ ಇಂಧನ ಇಲಾಖೆಯು ಪ್ರತಿದಿನ 40-50 ಕೋಟಿ ರೂ. ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಾರಿ ಮಳೆ ಕೊರತೆಯಿಂದಾಗಿ ಕೃಷಿ ಪಂಪ್ ಸೆಟ್ ಬಳಕೆ ಪ್ರಮಾಣ ಹೆಚ್ಚಾಗಿರುವುದರಿಂದ ಬೇಡಿಕೆಯು ದಿಢೀರ್ 16,000 ಮೆಗಾವ್ಯಾಟ್ ಗೆ ಏರಿಕೆಯಾಗಿದೆ. ಹೀಗಾಗಿ ಸಾಮಾನ್ಯ ಸಂದರ್ಭಕ್ಕೆ ಹೋಲಿಸಿದ್ರೆ 4,000-5,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದು ಇಂಧನ ಇಲಾಖೆಗೆ ತಲೆನೋವಾಗಿದೆ.
ಬೇಡಿಕೆಯಷ್ಟು ವಿದ್ಯುತ್ ಪೂರೈಸಬೇಕಾದರೆ ಕೊರತೆಯಷ್ಟು ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಕೊರತೆ ಪ್ರಮಾಣದಷ್ಟು ವಿದ್ಯುತ್ ಲಭ್ಯವಾಗದಿದ್ದರೆ ವಿದ್ಯುತ್ ಕಡಿತ ಅನಿವಾರ್ಯವಾಗಿದೆ. ಅನಿಯಮಿತಿ ಲೋಡ್ ಶೆಡ್ಡಿಂಗ್ ಮೂಲಕ ವಿದ್ಯುತ್ ಕೊರತೆ ಪ್ರಮಾಣ ನಿರ್ವಹಣೆಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.