ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ 2,000 ರೂ.ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30 ರ ನಾಳೆ ಮೈಸೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಯೋಜನೆಗೆ ಅರ್ಜಿ ಸಲ್ಲಿಸದವರು ಬೇಗ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವು ಹೇಗೆ ?
ಫಲಾನುಭವಿಗಳು ಗ್ರಾಮ ಒನ್, ಆನ್‍ಲೈನ್ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ನಾಡ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಹಾಗೂ ಪ್ರಜಾ ಪ್ರತಿನಿಧಿ ಮೂಲಕ ಸಹ ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಅರ್ಜಿದಾರರು ರೇಷನ್ ಕಾರ್ಡ್ ಸಂಖ್ಯೆ, ಮನೆಯ ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ತಾಯಿ ಕುಟುಂಬದ ಮುಖ್ಯಸ್ಥೆಯಾಗಿದ್ದರೆ ಮತ್ತು ಇತ್ತೀಚೆಗೆ ಅವರು ನಿಧನರಾಗಿದ್ದರೆ, ಪಡಿತರ ಚೀಟಿಯಲ್ಲಿ ಯಜಮಾನಿ ಯಾರೆಂಬುದು ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.
ಇನ್ನು ಫಲಾನುಭವಿಗಳು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೂ ಕೂಡ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಆದರೆ ಅವರು ಆದಾಯ ತೆರಿಗೆಯನ್ನು ಪಾವತಿಸುವವರಾಗಿರಬಾರದು.
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಘೋಷಿತರಾಗಿರುವ ಮಂಗಳಮುಖಿಯರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಡಿತರ ಚೀಟಿಯಲ್ಲಿ ಪತಿಯು ಕುಟುಂಬದ ಮುಖ್ಯಸ್ಥ ಎಂದಿರುವುದನ್ನು ಕುಟುಂಬದ ಯಜಮಾನಿ ಮಹಿಳೆ ಎಂದು ಬದಲಾಯಿಸಿ ನೊಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿ ಮಾಡಿರುವುದಿಲ್ಲ.
ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಟಾಲ್‍ಫ್ರೀ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಬಹುದು.
ಸೌಲಭ್ಯಕ್ಕೆ ಯಾರು ಅರ್ಹರು?
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ವೃದ್ದಾಪ್ಯ ವೇತನ, ವಿಧವಾ ಮಾಸಾಶನ, ವಿಶೇಷಚೇತನರ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಯಾವುದೇ ಮಾಸಾಶನ ಪಡೆಯುತ್ತಿದ್ದರೂ ಈ ಯೋಜನೆಯಡಿ ಮನೆಯೊಡತಿ 2 ಸಾವಿರ ರೂಪಾಯಿ ಪಡೆಯಲು ಅರ್ಹತೆ ಹೊಂದಿರುತ್ತಾಳೆ.
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ/ಜಿಎಸ್‍ಟಿ ರಿಟನರ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ.