ಬೆಂಗಳೂರು: ಅಕ್ರಮ ಕಟ್ಟಡ, ನಿವೇಶನಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುವ ಸಾಧ್ಯತೆಯಿದ್ದು, ಈ ಕುರಿತಾದ ಸಾಧಕ, ಬಾದಕ ಪರಿಶೀಲನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃಪದ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ.
ರಾಜ್ಯದ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡ ಮತ್ತು ಕಂದಾಯ ನಿವೇಶನಗಳಿಂದ ಎರಡು ಪಟ್ಟು ಆಸ್ತಿ ತೆರಿಗೆ ಸಂಗ್ರಹಿಸುವ ಕುರಿತಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣ ವೈರೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ ಸಂಪುಟ ಉಪಸಮಿತಿಯ ಸದಸ್ಯರಾಗಿದ್ದಾರೆ.
ಬಿಬಿಎಂಪಿ ಕಾಯ್ದೆಯನ್ನು ರಾಜ್ಯದ ಉಳಿದ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲು ಕರ್ನಾಟಕ ಮಹಾನಗರ ಪಾಲಿಕೆ ಮತ್ತು ಪುರಸಭೆ ಕಾಯ್ದೆ ಅಳವಡಿಸಿಕೊಳ್ಳುವ ಕುರಿತು ಸಂಪುಟ ಉಪ ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ.
ನಿಯಮದಡಿ ಅನಧಿಕೃತ ಕಟ್ಟಡಗಳಿಗೂ ತೆರಿಗೆ ವಿಧಿಸಬಹುದು, ಇದಕ್ಕೆ ಪ್ರತ್ಯೇಕ ಖಾತೆ ನಿರ್ವಹಣೆ ಮಾಡಿ ಎರಡು ಪಟ್ಟು ಆಸ್ತಿ ತೆರಿಗೆ ವಿಧಿಸಲಾಗುವುದು. ಕಾಯ್ದೆಯ ಪ್ರಕಾರ ತೆರಿಗೆ ಸಂಗ್ರಹಿಸುವುದರಿಂದ ಅನಥಿಕೃತ ಕಟ್ಟಡ, ನಿವೇಶನ ಕಾನೂನು ಬದಲಾವಣೆ ಆಗುವುದಿಲ್ಲ. ಕಾನೂನು ಪ್ರಕಾರ ಯಾವುದೇ ವೇಳೆ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಹೇಳಲಾಗಿದೆ.