ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬರ ಘೋಷಣೆ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬರ ಘೋಷಣೆಗೆ ಮುನ್ನ ಕೇಂದ್ರದ ಮಾನದಂಡ ಪ್ರಕಾರ ತಿಂಗಳಾಂತ್ಯಕ್ಕೆ ಬೆಳೆ ಸಮೀಕ್ಷೆ ನಡೆಸಿ ವರದಿ ಪಡೆಯಲು ನಿರ್ಧರಿಸಿದೆ.
ಮಂಗಳವಾರ ಪ್ರಕೃತಿ ವಿಕೋಪದಿಂದ ಎದುರಾಗುವ ಪರಿಸ್ಥಿತಿ ಪರಾಮರ್ಶಿಸಲು ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿದ ಬಳಿಕ ಸಚಿವ ಕೃಷ್ಣಬೈರೇಗೌಡ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ಬರ ಘೋಷಣೆಗೆ ಮುನ್ನ ಕೇಂದ್ರದ ಮಾನದಂಡದ ಪ್ರಕಾರ ಬೆಳೆ ಸಮೀಕ್ಷೆ ನಡೆಸಿ ವರದಿ ನೀಡಲು ನಿರ್ಧರಿಸಲಾಗಿದೆ ಎಂದರು.
ಆಗಸ್ಟ್ 23 ರ ಇಂದಿನಿಂದ ಎಲ್ಲಾ ಜಿಲ್ಲೆಗಳ 121 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆಯಲಾಗುವುದು. ಜಿಲ್ಲಾಧಿಕಾರಿಗಳಿಂದ ವರದಿ ಬಂದ ಬಳಿಕ ಮತ್ತೆ ಉಪಸಮಿತಿ ಸಭೆ ನಡೆಸಲಿದೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.